ಶ್ರವಣಬೆಳಗೊಳದ ವಿಂಧ್ಯಗಿರಿ ಪರ್ವತದಲ್ಲಿರುವ ಬಾಹುಬಲಿ ಸ್ವಾಮಿಯ ಪಾದಗಳಿಗೆ ವಿವಿಧ ದ್ರವ್ಯಗಳಿಂದ ಪೂಜೆ ನೆರವೇರಿಸಲಾಯಿತು.
ಶ್ರವಣಬೆಳಗೊಳ: ಇಲ್ಲಿನ ವಿಂಧ್ಯಗಿರಿ ದೊಡ್ಡಬೆಟ್ಟದಲ್ಲಿ ವಿರಾಜಮಾನ ವಿಶ್ವವಿಖ್ಯಾತ ಬಾಹುಬಲಿ ಮೂರ್ತಿಯ 1,044ನೇ ಪ್ರತಿಷ್ಠಾಪನಾ ಮಹೋತ್ಸವ ಬುಧವಾರ ವೈಭವದಿಂದ ಜೈನ ಮಠದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನೆರವೇರಿತು. ಮಹಾ ವೈರಾಗಿಗೆ ವಿವಿಧ ದ್ರವ್ಯಗಳಿಂದ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಬಾಹುಬಲಿಯ ಸನ್ನಿಧಿಯಲ್ಲಿ ಜಲ ತುಂಬಿಸಿದ ರಜತದ ಆಚಾರ್ಯ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳ ಕಲಶ, ಬ್ರಹ್ಮದೇವರ ಕಲಶ, ಕೂಷ್ಮಾಂಡಿನಿ ದೇವಿ ಕಲಶ, ಗುಳ್ಳುಕಾಯಜ್ಜಿ ಕಲಶ, ಕಾಳಲಾ ದೇವಿ ಕಲಶ, ಚಾವುಂಡರಾಯ ಕಲಶ, ಮಹಾಶಿಲ್ಪಿ ಕಲಶ, ಮಹಾ ಶಾಂತಿಧಾರಾ ಮತ್ತು ಚತುಷ್ಕೋನ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮಹಾ ಮಂತ್ರಗಳೊಂದಿಗೆ ವಿವಿಧ ಮಂಗಲ ವಾಧ್ಯಗಳು ಜಯಗಂಟೆ ಬಾರಿಸುತ್ತಿದ್ದಂತೆ ಶ್ವೇತ ಮತ್ತು ಕೇಸರಿ ವಸ್ತ್ರ ಧರಿಸಿದ ಶ್ರಾವಕ– ಶ್ರಾವಕಿಯರು, ಬಾಹುಬಲಿ ಪಾದಗಳಿಗೆ ಅಭಿಷೇಕ ನೆರವೇರಿಸಿ ಧನ್ಯತೆ ಮೆರೆದರು.
ನಂತರ ಎಳನೀರು, ಈಕ್ಷುರಸ, ದಾಳಿಂಬೆ ಮತ್ತು ಮಾವಿನಹಣ್ಣಿ ರಸ, ಕ್ಷೀರ, ಶ್ವೇತಕಲ್ಕಚೂರ್ಣ, ಅರಿಶಿಣದ ಹುಡಿ, ಅರಿಶಿಣ, ಕಷಾಯ, ಸರ್ವೌಷಧಿಗಳಿಂದ ಅಭಿಷೇಕ ನೆರವೇರಿಸಿ ಚತುಷ್ಕೋನಗಳಿಂದ ಅಭಿಷೇಕ ಮಾಡಲಾಯಿತು. ನಂತರ ರಕ್ತಚಂದನ, ಅಷ್ಟಗಂಧ, ಕೇಸರಿ, ಶ್ರೀಗಂಧದಿಂದ ಅಭಿಷೇಕ ನೆರವೇರಿಸಿ, ವಿವಿಧ ಪುಷ್ಪಗಳಿಂದ ಪುಷ್ಪವೃಷ್ಟಿ ಮಾಡಿ ಲೋಕದ ಶಾಂತಿಗಾಗಿ ಮಹಾ ಶಾಂತಿಧಾರಾ ಮಾಡಲಾಯಿತು.
ಸುಮಂಗಲಿಯರು 108 ಅರ್ಘ್ಯ ಮತ್ತು ದ್ರವ್ಯಗಳನ್ನು ಸ್ವಾಮಿಗೆ ಅರ್ಪಿಸಿದರು. ಪೂರ್ಣಾರ್ಘ್ಯದೊಂದಿಗೆ ಮಹಾಮಂಗಳಾರತಿ ಮಾಡಿ, ಭಕ್ತರಿಗೆ ಗಂಧೋದಕ ವಿತರಿಸಲಾಯಿತು. ಕ್ಷೇತ್ರದ ಧರ್ಮಪೀಠದ ಪರಂಪರೆಯಂತೆ ಆಚಾರ್ಯ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳು ಆಸೀನರಾಗಿದ್ದ ಪೀಠದಲ್ಲಿ ಶ್ರೀಗಳು ಸಿಂಹಾಸನಾರೋಹಣ ಮಾಡಿದಾಗ ಪೂಜೆ ಸಲ್ಲಿಸಲಾಯಿತು.
ಆಶೀರ್ವಚನ ನೀಡಿದ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮನುಷ್ಯ ಜನ್ಮದಲ್ಲಿ ಮಾಡಿದ ಸಾಕಷ್ಟು ಪಾಪಕರ್ಮಗಳನ್ನು ತೊಳೆಯಬೇಕಾದರೆ ಪ್ರತಿಯೊಬ್ಬರೂ ಸಹ, ದೇವ ಗುರು ಶಾಸ್ತ್ರಗಳನ್ನು ಆರಾಧಿಸಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಯಾವುದೇ ತರಹದ ಭೇದಭಾವ ಮಾಡದೇ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.
ಬಾಹುಬಲಿಯ ಪ್ರಾಂಗಣದಲ್ಲಿರುವ ಸುತ್ತಾಲಯವನ್ನು ವಿವಿಧ ಪುಷ್ಪ ಮತ್ತು ಧರ್ಮಧ್ವಜಗಳಿಂದ ಅಲಂಕರಿಸ ಲಾಗಿತ್ತು. ಪಾದಪೂಜೆಗೂ ಮುಂಚಿತ ವಾಗಿ ಬೆಳಿಗ್ಗೆ ಬಾಹುಬಲಿಯನೆತ್ತಿಯಿಂದ ಪಾದದವರೆಗೂ ಮಳೆಯ ಸಿಂಚನ ವಾಗಿದ್ದು, ಮಹಾಮಸ್ತಕಾಭಿಷೇಕ ನೋಡಿದಂತೆ ಆಗಿರುವುದಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.