ADVERTISEMENT

ಬೇಲೂರಿನಲ್ಲಿ ಕರವೇ ಪ್ರತಿಭಟನೆಗೆ ಮಣಿದ ಆಡಳಿತ: ಮಳಿಗೆ ವಶಕ್ಕೆ ಪಡೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:33 IST
Last Updated 20 ಫೆಬ್ರುವರಿ 2026, 6:33 IST
ಬೇಲೂರಿನ ತಾಲ್ಲೂಕು ಪಂಚಾಯಿತಿ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಿ ಮರುಹರಾಜು ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಗುರುವಾರ ಪ್ರತಿಭಟಿಸಲಾಯಿತು.
ಬೇಲೂರಿನ ತಾಲ್ಲೂಕು ಪಂಚಾಯಿತಿ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಿಸಿ ಮರುಹರಾಜು ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಗುರುವಾರ ಪ್ರತಿಭಟಿಸಲಾಯಿತು.   

ಬೇಲೂರು: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲ್ಲೂಕು ಘಟಕದ ಪ್ರತಿಭಟನೆಗೆ ಮಣಿದು ತಾಲ್ಲೂಕು ಪಂಚಾಯಿತಿಗೆ ಸೇರಿದ 16 ಅಂಗಡಿ ಮಳಿಗೆಗಳನ್ನು  ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಸ್. ಸತೀಶ್ ಕುಮಾರ್ ನೇತೃತ್ವದಲ್ಲಿ ಗುರುವಾರ ವಶಕ್ಕೆ ಪಡೆಯಲಾಯಿತು.

ಮಳಿಗೆಗಳನ್ನು ಖಾಲಿ ಮಾಡಿಸಿ, ಮರು ಹರಾಜು ನಡೆಸುವಂತೆ  ಹೈಕೋರ್ಟ್‌ ಆದೇಶಿಸಿದ್ದರೂ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿ ಇಲ್ಲಿನ  ಕಚೇರಿ ಎದುರು ವೇದಿಕೆ ತಾಲ್ಲೂಕು ಘಟಕದ ಮುಖಂಡರು  ಪ್ರತಿಭಟಿಸಿ, ಮಳಿಗೆ ಖಾಲಿ ಮಾಡಿಸದಿದ್ದರೆ ಅನಿರ್ದಿಷ್ಟಾವದಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದರು.   ಇದರಿಂದ ಸತೀಶ್ ಕುಮಾರ್  ಮಳಿಗೆಗಳನ್ನು ಖಾಲಿ ಮಾಡಿಸಿದ್ದರು.

 ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ‘ಮಳಿಗೆಗಳನ್ನು ಮರು ಹರಾಜು ಮಾಡುವಂತೆ ನ್ಯಾಯಾಲಯ ತಿಳಿಸಿದ್ದರೂ , ಅಧಿಕಾರಿಗಳು ವ್ಯಾಪಾರಸ್ಥರ ಜೊತೆ ಶಾಮಿಲಾಗಿ ಮಳಿಗೆಗಳನ್ನು ವಶಕ್ಕೆ ಪಡೆಯದ್ದರಿಂದ ಸರ್ಕಾರಕ್ಕೆ ₹4ಕೋಟಿ  ನಷ್ಟವಾಗಿದೆ’ ಎಂದು ದೂರಿದರು.

ADVERTISEMENT

 ವೇದಿಕೆ  ಘಟಕದ ಪ್ರದಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ,  ವ್ಯಾಪಾರಸ್ಥರು ಮತ್ತೆ ನ್ಯಾಯಾಲಯಕ್ಕೆ ಹೋಗಲು ಅಧಿಕಾರಿಗಳು ಅನುವುಮಾಡಿರುವರು ಎಂದು ಆರೋಪಿಸಿದರು.

 ಬಾಳೆಹಣ್ಣು ವ್ಯಾಪಾರಿ ಪರಶುರಾಮ ಮಾತನಾಡಿ, ವ್ಯಾಜ್ಯ ಜಿಲ್ಲಾ ನ್ಯಾಯಲಯದಲ್ಲಿದ್ದರೂ  ನೋಟಿಸ್ ನೀಡದೆ, ಏಕಾಏಕಿ ಖಾಲಿ ಮಾಡಿಸಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಲೂರಿನ ತಾಲ್ಲೂಕು ಪಂಚಾಯಿತಿಗೆ ಸೇರಿದ ಅವಧಿ ಮುಗಿದ ಅಂಗಡಿ ಮಳಿಗೆಗಳನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಜಿ.ಎಸ್. ಸತೀಶ್ ಕುಮಾರ್ ನೇತೃತ್ವದಲ್ಲಿ  ವಶಕ್ಕೆ ಪಡೆಯಲಾಯಿತು.

‘₹38 ಲಕ್ಷ ಬಾಡಿಗೆ ಹಣ ಬಾಕಿ’  

ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಸ್. ಸತೀಶ್ ಕುಮಾರ್ ಮಾತನಾಡಿ ಅಂಗಡಿ ಮಳಿಗೆಗಳ ಅವಧಿ ಮುಗಿದು 3ವರ್ಷಗಳು ಕಳೆದಿದೆ  ಈಗ ಎಲ್ಲ ವ್ಯಾಜ್ಯಗಳು ಮುಗಿದಿರುವುದರಿಂದ ನೋಟಿಸ್ ನೀಡಿ ವಶಕ್ಕೆ ಪಡೆಯಲಾಗಿದ್ದು  ಮರು ಹರಾಜು ನಡೆಸಲಾಗುವುದು ಎಂದರು. ಈ ಅಂಗಡಿ ಮಳಿಗೆಗಳಿಂದ ನಮಗೆ ₹38 ಲಕ್ಷ ಬಾಡಿಗೆ ಹಣ ಬರಬೇಕಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.