ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ತರಬೇತಿ ನೀಡುತ್ತಿರುವ ಮುಖ್ಯ ಶಿಕ್ಷಕ ಪುರುಷೋತ್ತಮ
ಆಲೂರು: ತಾಲ್ಲೂಕಿನ ಕುಂದೂರು ಹೋಬಳಿ ಸುಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11 ವರ್ಷದಿಂದ ಮುಖ್ಯ ಶಿಕ್ಷಕರಾಗಿರುವ ಕೆ.ಎಲ್. ಪುರುಷೋತ್ತಮ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದೆ.
ತಮ್ಮ ಜೇಬಿನ ಹಣ ಹಾಕಿ ಜೊತೆಗೆ ಸಂಬಂಧಿಕರಿಂದಲೂ ಹಣದ ನೆರವು ಪಡೆದು ಅವರು ಸುಮಾರು ₹7.71 ಲಕ್ಷ ಮೌಲ್ಯದ ವಾಹನವನ್ನು ಮಕ್ಕಳಿಗಾಗಿ ಖರೀದಿಸಿದ್ದು, ಮಕ್ಕಳ ಸಂಖ್ಯೆಯು 19ರಿಂದ 43ಕ್ಕೆ ಏರಿದೆ. ಸಂಬಂಧಿಗಳಾದ ಹೇಮಲತಾ ಹರೀಶ್, ಗಾಯಿತ್ರಿ ಪುಟ್ಟರಾಜು, ಸಾರಿಕಾ ಮಧು, ಶ್ವೇತಾ ಗಿರೀಶ್, ಪುನೀತ್ ಕುಮಾರ್ ವಾಹನ ಖರೀದಿಸಲು ತಲಾ ₹ 10 ಸಾವಿರ ನೀಡಿದ್ದರು. ಉಳಿದ ಶೇ10 ರಷ್ಟು ಹಣವನ್ನು ಅವರು ಇತರರಿಂದ ಪಡೆದರು. ಮಕ್ಕಳು ನಿತ್ಯ ವಾಹನದಲ್ಲೇ ಶಾಲೆಗೆ ಬಂದು ಮನೆಗೆ ಹೋಗುತ್ತಾರೆ.
ವಾಹನ ಮುಖ್ಯಶಿಕ್ಷಕರ ಹೆಸರಿಗೆ ನೋಂದಣಿಯಾಗಿದೆ.ಶಾಲೆಗೆ ಸಿಸಿಟಿವಿ ಕ್ಯಾಮೆರಾ, ಕಂಪ್ಯೂಟರ್, ಕಾಂಪೌಂಡ್ ಸೇರಿದಂತೆ ₹ 8 ಲಕ್ಷಕ್ಕೂ ಹೆಚ್ಚು ವೆಚ್ಚದ ಸೌಲಭ್ಯಗಳನ್ನು ದಾನಿಗಳ ಸಹಕಾರದಿಂದ ಪಡೆಯಲಾಗಿದೆ. ಶಾಲೆ ಮುಂದಿರುವ ಚರಂಡಿಗೆ ಸಿಮೆಂಟ್ ಸ್ಲ್ಯಾಬ್ ಹಾಕಿಸಲಾಗಿದೆ.
ಅವರ ಸಂಬಂಧಿಗಳು ಪ್ರತಿ ವರ್ಷ ಶಾಲೆ ಅಭಿವೃದ್ಧಿಗಾಗಿ ₹10ಸಾವಿರದಿಂದ ₹ 25 ಸಾವಿರ ದೇಣಿಗೆ ನೀಡುತ್ತಿದ್ದಾರೆ. ಶಿಕ್ಷಕಿ ಮಾರ್ಗರೇಟ್ ವಿಜಯ್ ಅವರು, ಪ್ರತಿ ವರ್ಷ ಶಾಲಾ ವಾಹನದ ವಿಮೆ ಕಂತು ಪಾವತಿಸುತ್ತಿದ್ದಾರೆ. ಚಾಲಕನನ್ನು ನೇಮಿಸಿದ್ದಾರೆ.
‘ಪ್ರಾರಂಭದಲ್ಲಿ ನಾನೇ ವಾಹನ ಚಾಲನೆ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಮಕ್ಕಳನ್ನು ಕರೆತರುತ್ತಿದ್ದೆ. ಎಲ್ಲ ಶಿಕ್ಷಕರು ಒಟ್ಟಾಗಿ ಚಾಲಕನಿಗೆ ₹ 8 ಸಾವಿರ ಸಂಬಳ ಪಾವತಿ ಮಾಡುತ್ತಿದ್ದೇವೆ’ ಎಂದು ಪುರುಷೋತ್ತಮ ಹೇಳಿದರು.
ಹೊನರಸೀಪುರ ತಾಲ್ಲೂಕಿನ ಕಬ್ಬಿನಹಳ್ಳಿಯ ಅವರು, ನಿವೃತ್ತ ಮುಖ್ಯ ಶಿಕ್ಷಕ ಕೆ. ಲಕ್ಮೇಗೌಡ–ಎಚ್.ಕೆ. ರುಕ್ಮಿಣಿ ದಂಪತಿ ಪುತ್ರ. ಸಹೋದರರೂ ಶಿಕ್ಷಕರಾಗಿದ್ದು, ಈ ಗೌರವ ದೊರೆತಿರುವುದು ಜಿಲ್ಲೆಗೆ, ಶಿಕ್ಷಕರ ಸಮುದಾಯಕ್ಕೆ ಹೆಮ್ಮೆ ತಂದಿದೆ’ ಎಂದು ಪೋಷಕರು ಹೇಳಿದ್ದಾರೆ. ಮುಂದಿನ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಪ್ರಾರಂಭವಾಗಲಿದೆ.
ಮುಖ್ಯಮಂತ್ರಿ, ಶಿಕ್ಷಣ ಸಚಿವರ ಸಮ್ಮುಖದಲ್ಲಿ ಇಂದು ಪ್ರಶಸ್ತಿ ಪ್ರದಾನ
ಸ್ವತಃ ವಾಹನ ಚಾಲನೆ ಮಾಡಿ ಮಕ್ಕಳನ್ನು ಕರೆತರುತ್ತಿದ್ದ ಮುಖ್ಯ ಶಿಕ್ಷಕ
ಆಲೂರು ತಾಲ್ಲೂಕಿಗೆ ಲಭಿಸಿದ ಪ್ರಶಸ್ತಿ ಗರಿ: ಶಿಕ್ಷಕರಲ್ಲಿ ಸಂಭ್ರಮ
ಪುರುಷೋತ್ತಮ ಅವರು ಮುಖ್ಯ ಶಿಕ್ಷಕರಾಗಿ ಬಂದ ನಂತರ, ಎಲ್ಲರೂ ಸೇರಿ ಶಾಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ನಮ್ಮೂರಿನ ಹೆಮ್ಮೆ.ಸುಮಿತ್ರಾ,ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಮ್ಮ ಹಣ ಸೇರಿದಂತೆ ಹಲವು ದಾನಿಗಳಿಂದ ಸಹಾಯ ಪಡೆದು ಶಿಕ್ಷಣ ಮತ್ತು ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ..ಜೆ.ಕೃಷ್ಣೇಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.