ADVERTISEMENT

ಜೆಡಿಎಸ್ ಕಿರುಹೊತ್ತಿಗೆಯಲ್ಲಿ ಭವಾನಿ ಭಾವಚಿತ್ರ: ಬಿರುಸಿನ ಚರ್ಚೆ

ಜೆಡಿಎಸ್ ಕಿರುಹೊತ್ತಿಗೆಯಲ್ಲಿ ಭವಾನಿ ಭಾವಚಿತ್ರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 19:12 IST
Last Updated 27 ಮಾರ್ಚ್ 2023, 19:12 IST
ಜೆಡಿಎಸ್‌ ಬಿಡುಗಡೆ ಮಾಡಿರುವ ಕಿರು ಹೊತ್ತಿಗೆ
ಜೆಡಿಎಸ್‌ ಬಿಡುಗಡೆ ಮಾಡಿರುವ ಕಿರು ಹೊತ್ತಿಗೆ   

ಹಾಸನ: ಜೆಡಿಎಸ್ ಟಿಕೆಟ್ ಗೊಂದಲ ಮುಂದುವರಿದಿರುವ ನಡುವೆ ಜಿಲ್ಲೆಯ ಅಭಿವೃದ್ಧಿ ಕುರಿತು ಪಕ್ಷದಿಂದ ಬಿಡುಗಡೆ ಮಾಡಲಾಗಿರುವ ಕಿರುಹೊತ್ತಿಗೆಯಲ್ಲಿ ಭವಾನಿ ರೇವಣ್ಣ ಅವರ ಭಾವಚಿತ್ರ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಕಿರುಹೊತ್ತಿಗೆಯನ್ನು ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಲಾಗುತ್ತಿದೆ. ಇದರಲ್ಲಿ ಜಿಲ್ಲೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಜೆಡಿಎಸ್ ಅಭ್ಯರ್ಥಿಗಳ ಭಾವಚಿತ್ರಗಳಿವೆ. ಹೊಳೆನರಸೀಪುರದ ಎಚ್.ಡಿ. ರೇವಣ್ಣ, ಬೇಲೂರಿನ ಕೆ.ಎಸ್. ಲಿಂಗೇಶ್‌, ಶ್ರವಣಬೆಳಗೊಳ ಕ್ಷೇತ್ರದ ಸಿ.ಎನ್‌. ಬಾಲಕೃಷ್ಣ, ಸಕಲೇಶಪುರ ಕ್ಷೇತ್ರದ ಎಚ್‌.ಕೆ. ಕುಮಾರಸ್ವಾಮಿ, ಈಗಾಗಲೇ ಘೋಷಿಸಿರುವ ಅರಕಲಗೂಡು ಕ್ಷೇತ್ರದ ಎ. ಮಂಜು, ಅರಸೀಕೆರೆ ಕ್ಷೇತ್ರದ ಬಾಣಾವರ ಅಶೋಕ್‌ ಅವರ ಚಿತ್ರಗಳಿವೆ. ಇದರ ಜೊತೆಗೆ ಭವಾನಿ ರೇವಣ್ಣ ಅವರ ಚಿತ್ರವನ್ನೂ ಪ್ರಕಟಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಚ್.ಡಿ. ರೇವಣ್ಣ, ‘ಭವಾನಿ ಅವರು ಹಿಂದೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು
ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದರು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೆ ಕೊಂಡೊಯ್ದಿದ್ದರು. ಆರೋಗ್ಯ ಇಲಾಖೆಯಲ್ಲಿ ಸಹ ಜನ ಮೆಚ್ಚುಗೆಯ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಅವರ ಫೋಟೊ ಹಾಕಲಾಗಿದೆ ಅಷ್ಟೇ’ ಎಂದು ತಿಳಿಸಿದರು.

ADVERTISEMENT

ಪುಸ್ತಕದಲ್ಲಿ ಬಾಣಾವರ ಅಶೋಕ್ ಹಾಗೂ ಎ. ಮಂಜು ಭಾವಚಿತ್ರ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಇಬ್ಬರೂ ಅಭ್ಯರ್ಥಿಗಳನ್ನು ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಹಾಕಲಾಗಿದೆ.
ಎಚ್‌.ಡಿ.ದೇವೇಗೌಡರು ಸೇರಿದಂತೆ ಎಲ್ಲ ನಾಯಕರೂ ಚರ್ಚಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.