ADVERTISEMENT

ಶೋಷಿತ ಸಮಾಜ ಎಚ್ಚರಗೊಳ್ಳಲಿ: ರಾಜ್ಯ ಬೌದ್ಧ ಮಹಾಸಭಾದ ಅಧ್ಯಕ್ಷ ಸಿದ್ದರಾಜು

ಭೀಮಾ ಕೊರೆಗಾಂವ ವಿಜಯೋತ್ಸವದಲ್ಲಿ ಬೌದ್ಧ ಮಹಾಸಭಾ ಅಧ್ಯಕ್ಷ ಸಿದ್ದರಾಜು ಕರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:21 IST
Last Updated 2 ಜನವರಿ 2026, 7:21 IST
ಸಕಲೇಶಪುರದ ಮುಖ್ಯ ಬೀದಿಯಲ್ಲಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಕೊರೆಗಾಂವ್ ವಿಜಯಸ್ತಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.
ಸಕಲೇಶಪುರದ ಮುಖ್ಯ ಬೀದಿಯಲ್ಲಿ ಕಲಾತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಕೊರೆಗಾಂವ್ ವಿಜಯಸ್ತಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.   

ಪ್ರಜಾವಾಣಿ ವಾರ್ತೆ

ಸಕಲೇಶಪುರ: ಶೋಷಿತ ಸಮಾಜ ಎಚ್ಚರಗೊಳ್ಳುವ ಅಗತ್ಯವಿದೆ ಎಂದು ರಾಜ್ಯ ಬೌದ್ಧ ಮಹಾಸಭಾದ ಅಧ್ಯಕ್ಷ ಸಿದ್ದರಾಜು ಹೇಳಿದರು.

ಗುರುವಾರ ಪಟ್ಟಣದ ಹಳೆಯ ಬಸ್ ನಿಲ್ದಾಣ ಸಮೀಪ ಭೀಮಾ ಕೊರೆಗಾಂವ್ ವಿಜಯೋತ್ಸವ ಸಮಿತಿ ಹಮ್ಮಿಕೊಂಡಿದ್ದ 8ನೇ ವರ್ಷದ ಭೀಮಾ ಕೊರೆಗಾಂವ್ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ADVERTISEMENT

ಇಂದಿನ ಯುವ ಸಮುದಾಯ ಅಂಬೇಡ್ಕರ್ ಅವರ ಪ್ರತಿಯೊಂದು ನಡೆ-ನುಡಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. 208 ವರ್ಷಗಳ ಹಿಂದೆ ನಡೆದ ಕೊರೆಗಾಂವ್ ಯುದ್ಧ ಅಸ್ಪೃಶ್ಯತೆಯ ವಿರುದ್ಧ ನಡೆದ ಮೊದಲ ಹೋರಾಟ. ಬಹುಜನರ ಇತಿಹಾಸವನ್ನು ಬರೆಯದೇ ಇರುವುದು ದುರಂತವಾಗಿದೆ. ಶಿಕ್ಷಣದಿಂದ ಮಾತ್ರ ಶೋಷಿತ ಸಮಾಜ ಸುಧಾರಣೆಯಾಗಲಿದೆ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಮನುಸ್ಮೃತಿಯನ್ನು ಜೀವನಪೂರ್ತಿ ವಿರೋಧಿಸಿದ್ದ ಅಂಬೇಡ್ಕರ್ ಮಹಾ ಮಾನವತಾವಾದಿ ಆಗಿದ್ದರು ಎಂದು ಹೇಳಿದರು.

ಶಿಕ್ಷಣವಿಲ್ಲದ ಮನುಷ್ಯ ಪಶುವಿಗೆ ಸಮಾನ. ಆದ್ದರಿಂದ ಯಾರೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ಅಂಬೇಡ್ಕರ್ ರಚಿಸಿದ ಸಂವಿಧಾನದ ಬದಲಾಗಿ ಮನುಸ್ಮೃತಿಯನ್ನು ಇಡುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಶೋಷಿತ ಸಮಾಜ ಎಚ್ಚರಿಕೆಯಿಂದ ಇರಬೇಕು. ಜಾತಿ ದೇಶಕ್ಕೆ ಮಾರಕ ಎನ್ನುವುದಾದರೆ, ಜಾತಿಯನ್ನು ಅನುಸರಿಸುವ ವ್ಯಕ್ತಿಯೂ ಅಪಾಯಕಾರಿಯೇ. ಅಂತಹ ವ್ಯಕ್ತಿಗಳ ಸಂತತಿ ಇರಬಾರದು. ದಲಿತರ ಜಾಗೃತಿ ಅಗತ್ಯವಿದ್ದರೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಲೇಖಕಿ ಅನುಪಮ ಮಾತನಾಡಿ, ಶೋಷಿತ ಸಮಾಜ ಬದಲಾಗಬೇಕಿದೆ. ಇತಿಹಾಸವನ್ನು ಆಗಾಗ್ಗೆ ಬಗೆದು ನೋಡಬೇಕಿದೆ. ಇದರಿಂದ ಮಾತ್ರ ನಾವು ಜಾಗೃತರಾಗಲು ಸಾಧ್ಯ. ಅವಮಾನವನ್ನು ಸಹಿಸದ ವ್ಯಕ್ತಿಗಳು ಮಾತ್ರ ಗೆಲ್ಲಲು ಸಾಧ್ಯ. ಇದನ್ನು ನಮಗೆ ಕಲಿಸಿದವರು ಕೊರೆಗಾಂವ್
ಕಾಳಿಗಳು ಎಂದರು.

ವಕೀಲ ಸುಧೀರ್ ಕುಮಾರ್ ಮುರುಡಿ ಮಾತನಾಡಿ, ಕೊರೆಗಾಂವ್ ವಿಜಯೋತ್ಸವದ ನಂತರ ದಲಿತರಿಗೆ ತಮ್ಮ ತೋಳ್ಬಲದ ಅರಿವು ಮೂಡಿದೆ. ನಮ್ಮೊಂದಿಗೆ ಇದ್ದೇ ನಮ್ಮ ವಿರುದ್ಧ ಕೆಲಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಶೋಷಿತರ ವಿರುದ್ಧ ಇರುವವರಿಗೆ ಮತ ನೀಡಬಾರದು. ನಮ್ಮ ಮತಗಳು ವ್ಯರ್ಥವಾಗಬಾರದು. ಶೋಷಿತರ ಮೊದಲ ಗೆಲುವೇ ಕೊರೆಗಾಂವ್ ಯುದ್ಧ. ಇದನ್ನು ಇತಿಹಾಸದಲ್ಲಿ ದಾಖಲಿಸದೇ ಇರುವುದು ಶೋಷಿತ ಸಮಾಜಕ್ಕೆ ಮಾಡಿದ ದ್ರೋಹ. ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ಎಚ್ಚರವಾಗಿರಿ. ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಮಿನಿವಿಧಾನ ಸೌಧ ಸಮೀಪದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಕಲಾ ತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಕೊರೆಗಾಂವ್ ವಿಜಯಸ್ತಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.

ಭಂತೇಜಿ ಸುಗತ ಪಾಲ, ಜಿ.ಪಂ. ಮಾಜಿ ಸದಸ್ಯ ಬೈರಮುಡಿ ಚಂದ್ರು, ಕಾಂಗ್ರೆಸ್ ಮುಖಂಡ ಮುರುಳಿಮೋಹನ್, ಸಮಿತಿ ಅಧ್ಯಕ್ಷ ಲಕ್ಷ್ಮಣ ಕೀರ್ತಿ, ಗೌರವಾಧ್ಯಕ್ಷ ನಲ್ಲುಳ್ಳಿ ಈರಪ್ಪ, ಹೆತ್ತೂರು ಅಣ್ಣಯ್ಯ, ಸಕಲೇಶಪುರ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ್ ಮುಫೀಜ್ ಕೊಮಾರಯ್ಯ, ಭೀಮ್ ಆರ್ಮಿ ಜಗದೀಶ್, ಯಡೇಹಳ್ಳಿ ಆರ್. ಮಂಜುನಾಥ್, ಕಟ್ಟೆಗದ್ದೆ ನಾಗರಾಜ್, ಪ್ರಶಾಂತ್ ಕಲ್ಗಣೆ, ಭೀಮ ಕೊರೆಂಗಾವ್ ಸಮಿತಿ ಅಧ್ಯಕ್ಷ ರಾಜಶೇಖರ್, ಪರಿಶಿಷ್ಟ ಜಾತಿ ನೌಕರರ ಸಂಘದ ಅಧ್ಯಕ್ಷ  ಮಹೇಶ್, ಇಒ ಗಂಗಾಧರ್, ಕೀರ್ತಿ ಸ್ವರೂಪ್, ಬೈಕೆರೆ ದೇವರಾಜ್, ಕಲ್ಪನಾ ಕೀರ್ತಿ ಮುಂತಾದವರು ಉಪಸ್ಥಿತರಿದ್ದರು.

ಗಮನಸೆಳೆದ ಮೆರವಣಿಗೆ

ಪಟ್ಟಣದ ಮುಂಭಾಗದಿಂದ ವಿವಿಧ ಪುಷ್ಪಗಳಿಂದ ಅಲಂಕೃತ ಭೀಮಾ ಕೊರೆಗಾಂವ್ ಸ್ತಂಭದ ರಥ ಬೆಳಿಗ್ಗೆ 11 ಗಂಟೆಗೆ ಹೊರಟು ಪಟ್ಟಣದ ರಾಜಭೀದಿಯಲ್ಲಿ ಸಂಜೆ 4 ಗಂಟೆಯವರೆಗೆ ಸಂಚರಿಸಿತು. ಭಂತೇಜಿ ಉದ್ಘಾಟಿಸಿದರು. ವಿವಿಧ ವಾದ್ಯಗಳು ಡಿಜೆ ಸಂಗೀತ ಗೊಂಬೆ ಕುಣಿತ ಜನ ಮನ ಸೆಳೆದವು. ಸಂಗೀತಕ್ಕೆ ಜನ ಕುಣಿದು ಕುಪ್ಪಳಿಸಿದರು. ಹೆಣ್ಣು ಮಕ್ಕಳ ಕುಣಿತ ಭರ್ಜರಿಯಾಗಿತ್ತು. ಉಟದ ವ್ಯವಸ್ಥೆ ಮಾಡಲಾಗಿತ್ತು. ಕಲ್ಲಂಗಡಿ ಹಣ್ಣು ವಿತರಿಸಲಾಯಿತು. ಮುಸ್ಲಿಂ ಸಂಘಟನೆಗಳು ಮಜ್ಜಿಗೆ ವಿತರಿಸಿದವು. ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಬೃಹತ್ ಪೆಂಡಾಲಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.