ಆಲೂರು: ತಾಲ್ಲೂಕಿನ ಏಕೈಕ ವಾಟೆಹೊಳೆ ಜಲಾಶಯದ ಬಲದಂಡೆ ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಕಾಲುವೆಯಲ್ಲಿ ಕುಸಿದಿರುವ ಮಣ್ಣನ್ನು ಹೊರ ತೆಗೆದು ನೀರು ಸರಾಗ ಹರಿಯುವಂತೆ ಮಾಡಬೇಕೆಂದು ಶಾಸಕ ಸಿಮೆಂಟ್ ಮಂಜು ಅಧಿಕಾರಿಗಳಿಗೆ ಸೂಚಿಸಿ, ಕಾಲುವೆ ದುರಸ್ತಿ ಕುರಿತಂತೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಶನಿವಾರ ಚಿಕ್ಕಕಣಗಾಲು ಬಳಿ ವಾಟೆಹೊಳೆ ಜಲಾಶಯದ ಬಲದಂಡೆ ನಾಲೆ ಕಾಲುವೆ ಪರಿಶೀಲಿಸಿ ಮಾತನಾಡಿದ ಅವರು, ಕಾಲುವೆಯ ಸರಿಯಾದ ನಿರ್ವಹಣೆ ಇಲ್ಲದೆ ಹಲವು ಕಡೆಗಳಲ್ಲಿ ಕುಸಿತವಾಗಿದೆ. ಗಿಡಗಂಟಿಗಳು ಬೆಳೆದು ನಿಂತಿರುವ ಕಾರಣ ಸರಿಯಾಗಿ ನೀರು ಹರಿಯುತ್ತಿಲ್ಲ ಎಂದರು.
ವಾಟೆಹೊಳೆ ಮತ್ತು ಯಗಚಿ ಜಲಾಶಯಗಳು ಸಮೀಪವಿದ್ದರೂ ಕಾಲುವೆ ವಿಸ್ತರಣೆ ಮತ್ತು ದುರಸ್ತಿ ಕಾರ್ಯ ನಡೆಸದೆ ಇರುವುದರಿಂದ, ಈ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಮರೀಚಿಕೆಯಾಗಿದೆ. ಕಾಲುವೆ ಸಂಪರ್ಕವಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಹೂಳು ತುಂಬಿ, ಗಿಡಗಂಟಿ ಬೆಳೆದಿದೆ. ಕಾಲುವೆ ದುರಸ್ತಿಗೆ ಕ್ರಮ ಕೈಗೊಂಡು ನೀರಾವರಿ ಸೌಲಭ್ಯ ಕಲ್ಪಿಸುವಂತೆಸ್ಥಳೀಯರು ರೈತರು ಶಾಸಕರಿಗೆ ಮನವಿ ಮಾಡಿದರು.
ಶಾಸಕರು ಗ್ರಾಮದ ಕಾಳೇಶ್ವರಸ್ವಾಮಿ ಮತ್ತು ಮಾಸ್ತಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಗ್ರಾಮದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.