ADVERTISEMENT

ಕರ್ನಾಟಕ-ತಮಿಳುನಾಡು ರಾಜ್ಯಗಳ ಜತೆ ಕೇಂದ್ರ ಚರ್ಚೆ ನಡೆಸಲಿ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 16:39 IST
Last Updated 7 ಜನವರಿ 2022, 16:39 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜತೆ ಕೇಂದ್ರ ಸರ್ಕಾರ ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಮನವಿ ಮಾಡಿದರು.

ದಶಕಗಳ ಹಿಂದೆಯೇ ಮೇಕೆದಾಟು ಯೋಜನೆ ಚರ್ಚೆ ಆರಂಭಗೊಂಡಿದೆ. ಯೋಜನೆ ಜಾರಿಯಿಂದ ತಮಿಳುನಾಡು ಮತ್ತು ಬೆಂಗಳೂರಿಗೆ ನೀರು ಸಿಗಲಿದೆ. ಹಾಸನ, ಚಿಕ್ಕಮಗಳೂರಿಗೆ ಸಿಗಲಿದೆಯೇ? ರಾಜಕೀಯ ಉದ್ದೇಶಕ್ಕೆ ಕಾಂಗ್ರೆಸ್‌ ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸದಿದ್ದರೆ ಹತ್ತು ವರ್ಷವಾದರೂ ಯೋಜನೆ ಸಾಕಾರಗೊಳ್ಳುವುದಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಮನಗರ ಜಿಲ್ಲೆ ಮಾಡಿದ್ದು ನಾನು ಮತ್ತು ಕುಮಾರಸ್ವಾಮಿ. ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಡೇರಿ, ಡಿಸಿಸಿ ಬ್ಯಾಂಕ್ಮಾಡಲು ಡಿ.ಕೆ. ಸಹೋದರರು ಅಡ್ಡಗಾಲು ಹಾಕಿದರು. ಜಿಲ್ಲೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದರು.

ADVERTISEMENT

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ್ದರು. 28 ಕಾಲೇಜು ತೆರೆಯಲು ಸಹಕಾರ ನೀಡಿದ್ದರು. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ₹144 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ, ನಂತರ ಬಂದ ಬಿಜೆಪಿ ಸರ್ಕಾರ ತಡೆಯೊಡ್ಡಿತು.ನನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ಏನೆಲ್ಲಾ ಕೆಲಸ ಮಾಡಲಾಗಿದೆ ಎಂಬುದನ್ನು ದಾಖಲೆ ತೆಗೆದು ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಹಲವು ವರ್ಷ ಅಧಿಕಾರದಲ್ಲಿದ್ದರೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿಲ್ಲ. ಕೃಷ್ಣ ನಡೆ ಪ್ರಾಂರಭಿಸಿ, ವರ್ಷಕ್ಕೆಹತ್ತು ಸಾವಿರ ಕೋಟಿ ರೂಪಾಯಿ ನೀರಾವರಿಗೆ ವೆಚ್ಚ ಮಾಡಲಾಗುವುದು ಎಂದು ಹೇಳಿತು. ಇದುವರೆಗೂ ನೀರಾವರಿ ಯೋಜನೆಗೆ ಎಷ್ಟು ಹಣ ಖರ್ಚಾಗಿದೆ ಲೆಕ್ಕ ನೀಡಲಿಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಜನರ ಜೀವ ಉಳಿಸಲು ಸರ್ಕಾರ ಆದ್ಯತೆ ನೀಡಬೇಕು. ತಜ್ಞರ ಸಮಿತಿ ನೀಡುವ ಸೂಚನೆಯನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರಕ್ಕೆಭೇಟಿನೀಡಿದ್ದ ವೇಳೆ ಉಂಟಾಗಿದ್ದ ಭದ್ರತಾ ಲೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಹುದ್ದೆ ಭಾರತೀಯ ಜನತಾ ಪಕ್ಷದ ಹುದ್ದೆ ಅಲ್ಲ. ಪ್ರಧಾನಿಗೆ ಭದ್ರತೆ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರ್ತವ್ಯ. ಎಂತಹುದೇ ಸಂದರ್ಭದಲ್ಲಿ ಆ ಹುದ್ದೆಗೆ ಧಕ್ಕೆ ತರದಂತೆ ನೋಡಿಕೊಳ್ಳಬೇಕು. ಪಂಜಾಬ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರು ಕೇಂದ್ರ ಗೃಹ ಸಚಿವರ ಜತೆ ಚರ್ಚೆ ನಡೆಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.