ADVERTISEMENT

ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಬಾನು ಮುಷ್ತಾಕ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 17:47 IST
Last Updated 28 ಆಗಸ್ಟ್ 2025, 17:47 IST
ಹಾಸನದ ತಮ್ಮ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನ ಸ್ವೀಕರಿಸಿ ಲೇಖಕಿ ಬಾನು ಮುಷ್ತಾಕ್‌ ಮಾತನಾಡಿದರು 
ಹಾಸನದ ತಮ್ಮ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸನ್ಮಾನ ಸ್ವೀಕರಿಸಿ ಲೇಖಕಿ ಬಾನು ಮುಷ್ತಾಕ್‌ ಮಾತನಾಡಿದರು    

ಹಾಸನ: ‘ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಕರೆಸಿಕೊಳ್ಳುತ್ತಿದ್ದಾಳೆ’ ಎಂದು ಲೇಖಕಿ ಬಾನು ಮುಷ್ತಾಕ್‌ ಹೇಳಿದರು.

ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ನನ್ನ ಗೆಳತಿ, ಲೇಖಕಿ ಮೈಸೂರಿನ ಮೀನಾ ಅವರು ನನಗೆ ಬುಕರ್ ಪ್ರಶಸ್ತಿ ಬರಲಿ ಎಂದು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರೆಂಬುದನ್ನು ಕೇಳಿ ಸಂತೋಷಪಟ್ಟಿದ್ದೆ. ಸಾಹಿತ್ಯ ಉತ್ಸವದ ಸಂದರ್ಭದಲ್ಲಿ ಮೈಸೂರಿಗೆ ಹೋಗಿದ್ದೆ. ಆಗ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರಿಸೋಣವೆಂದಿದ್ದರು. ಸಮಯದ ಅಭಾವದಿಂದ ಆಗಿರಲಿಲ್ಲ. ಸದ್ಯದಲ್ಲೇ ಬರುವುದಾಗಿ ಹೇಳಿ ಬಂದಿದ್ದೆ. ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ’ ಎಂದರು. 

‘ಕೋಟ್ಯಂತರ ಕನ್ನಡಿಗರು ಎಷ್ಟೊಂದು ಪ್ರೀತಿ, ಅಭಿಮಾನ ತೋರಿಸುತ್ತಿದ್ದಾರೆ. ಒಬ್ಬಿಬ್ಬರ ನಕಾರಾತ್ಮಕ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷಗಳು ರಾಜಕೀಯ ಮಾಡಬೇಕು. ಆದರೆ ಯಾವುದರ ಬಗ್ಗೆ ಮಾಡಬೇಕು ಅಥವಾ ಮಾಡಬಾರದು ಎಂಬ ಪ್ರಜ್ಞೆ ರಾಜಕಾರಣಿಗಳಿಗೆ ಇರಬೇಕು’ ಎಂದರು.

ADVERTISEMENT

‘ಮೈಸೂರಿನ ಸಂಸದ ಯದುವೀರ್ ಅಂಥವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷಿಸುವೆ. ಸಮತೋಲನದಿಂದ ವಿಷಯದ ಅನ್ವೇಷಣೆ ಮಾಡಿ, ದ್ವಂದ್ವವಿಲ್ಲದೆ ಹೇಳಿಕೆ ನೀಡಬೇಕು. ವಿದ್ಯಾವಂತ, ಸುಸಂಸ್ಕೃತ ಮನಸುಗಳಿಗೆ ಮಾತ್ರ ಅದು ಸಾಧ್ಯ. ಬುಕರ್‌ನಂತಹ ಪ್ರಶಸ್ತಿ ಸಿಗುವುದು ಸುಲಭದ ಮಾತಲ್ಲ. ಅದರ ಬಗ್ಗೆಯೂ ಒಂದಿಬ್ಬರು ಕೇವಲವಾಗಿ ಮಾತನಾಡುತ್ತಾರೆ. ನನಗೆ ಬೇಜಾರಿಲ್ಲ. ಅವರವರ ಮಟ್ಟಕ್ಕೆ ಮಾತಾಡ್ತಾರೆ, ಮಾತಾಡಲಿ’ ಎಂದರು. 

‘ಕನ್ನಡವನ್ನು ಪ್ರೀತಿಸಿ, ಬಳಸಿ, ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಅಲ್ಲಿನವರ ಬಾಯಲ್ಲಿ ಕನ್ನಡ ಎಂದು ಹೇಳಿಸುತ್ತಿದ್ದೇನೆ. ನನ್ನಂತೆ ನೀವೂ ಸಾಧಿಸಿದರೆ ಟೀಕಿಸಲು ಅರ್ಹತೆ ಸಿಗುತ್ತದೆ. ಇಲ್ಲದಿದ್ದರೆ ಮಾತಿನಲ್ಲಿ ಸ್ಪಷ್ಟತೆ ಇರುವುದಿಲ್ಲ. ನಂಬಿದವರನ್ನು ಕನ್ನಡ ಯಾವತ್ತೂ ಕೈ ಬಿಡಲ್ಲವೆಂಬುದಕ್ಕೆ ನಾನೇ ಸಾಕ್ಷಿ’ ಎಂದರು.

‘2023ರಲ್ಲಿ ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರವಿಟ್ಟಿದ್ದಕ್ಕೆ ಆಯೋಜನೆಗೊಂಡಿದ್ದ ಜನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಾನು ಆಡಿದ್ದ ಮಾತಿನ ತುಣುಕು ಹಾಕಿ, ನನ್ನ ವಿರುದ್ಧ ಕೆಲವರು ಆರೋಪಿಸಿದ್ದಾರೆ. ಕನ್ನಡವನ್ನು ಭಾಷೆಯಾಗಿ ಬಳಸುವ ಬದಲು, ಭಾವುಕವಾಗಿ ಪರಿಗಣಿಸಿದ್ದೀರಿ. ದೇವತೆಯಾಗಿ ಮಾಡಿ ಮಂದಾಸನದಲ್ಲಿ ಇದ್ದಾಗ, ಅದಕ್ಕೆ ಕೈಮುಗಿದು ಬಂದರೆ ಮುಗೀತು. ಭಾಷೆಯನ್ನು ಭಾಷೆಯಾಗಿ ಪರಿಗಣಿಸಿದಾಗ ನಾನು, ನೀವು ಎಲ್ಲರೂ ಓದಬೇಕಾಗುತ್ತೆ. ನಮ್ಮ ಭಾಷೆಯನ್ನಾಗಿ ಕನ್ನಡವನ್ನು ನಾವು ಬಳಸೋಣ’ ಎಂದರು.

- ಗೋಕಾಕ್ ಸಮಿತಿ ಹಾಸನಕ್ಕೆ ಬಂದಾಗ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುತ್ತಿರುವವರಷ್ಟೇ ಮಾತನಾಡಬೇಕು ಎಂದಿದ್ದರು. ಆಗ ಮಾತನಾಡಿದ್ದ ಏಕೈಕ ಮಹಿಳೆ ನಾನು. ನನ್ನ ಮೂವರು ಹೆಣ್ಣು ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿದ್ದರು. ನಾನು ಹೇಳಿದ ಮಾತು ತಿರುಚುವ ಅಗತ್ಯವಿಲ್ಲ
–ಬಾನು ಮುಷ್ತಾಕ್‌ ಲೇಖಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.