ADVERTISEMENT

ಪಂಚಲಿಂಗಗಳ ತಪೋಭೂಮಿ ನಾಗರನವಿಲೆ

ಕಲ್ಯಾಣಿ, ಉದ್ಯಾನದ ಸೊಬಗು ಕಣ್ತುಂಬಿಕೊಳ್ಳಲು ಬನ್ನಿ

ಸಿದ್ದರಾಜು ಎಂ.
Published 8 ಜೂನ್ 2019, 16:36 IST
Last Updated 8 ಜೂನ್ 2019, 16:36 IST
ನಾಗರನವಿಲೆಯಲ್ಲಿರುವ ನಾಗೇಶ್ವರ ದೇಗುಲ.
ನಾಗರನವಿಲೆಯಲ್ಲಿರುವ ನಾಗೇಶ್ವರ ದೇಗುಲ.   

ಚನ್ನರಾಯಪಟ್ಟಣ: ದಾಸೋಹ ಭವನ, ಯಾತ್ರಿ ನಿವಾಸ, ಕಲ್ಯಾಣಿ, ಉದ್ಯಾನದ ಸೊಬಗು.. ಇದನ್ನು ನೋಡಬೇಕಾದರೆ ತಾಲ್ಲೂಕಿನ ನಾಗರನವಿಲೆ ಗ್ರಾಮದ ನಾಗೇಶ್ವರ ದೇಗುಲಕ್ಕೆ ಭೇಟಿ ನೀಡಬೇಕು.

ನಾಗೇಶ್ವರಸ್ವಾಮಿ, ಸೋಮೇಶ್ವರಸ್ವಾಮಿ, ಬ್ರಹ್ಮಲಿಂಗೇಶ್ವರಸ್ವಾಮಿ, ಸಿದ್ಧೇಶ್ವರಸ್ವಾಮಿ, ಮಲ್ಲೇಶ್ವರಸ್ವಾಮಿ. ಹೀಗೆ ಪಂಚಲಿಂಗಗಳ ತಪೋಭೂಮಿ ಎನಿಸಿಕೊಂಡಿದೆ. ಮುಜುರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನ ಅಭಿವೃದ್ಧಿಪಥದತ್ತ ಸಾಗುತ್ತಿದೆ.

ಈ ಹಿಂದೆ ವಾರದಲ್ಲಿ ಒಂದು ದಿನ ಮಾತ್ರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇತ್ತು. ನಂತರ ಅದನ್ನು ವಾರದ ಏಳೂ ದಿನಕ್ಕೂ ವಿಸ್ತರಿಸಲಾಯಿತು.

ADVERTISEMENT

ಹೊಸದಾಗಿ ನಿರ್ಮಿಸಿದ ದಾಸೋಹ ಭವನ ಮತ್ತು ಯಾತ್ರಿ ನಿವಾಸವನ್ನು 2017ರಲ್ಲಿ ಉದ್ಘಾಟಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.

ದೇಗುಲದ ಮುಂಭಾಗದಲ್ಲಿ ಉದ್ಯಾನ ನಿರ್ಮಿಸಿದ್ದು, ವಿವಿಧ ಬಗೆಯ ಗಿಡಗಳನ್ನು ನೆಟ್ಟು ಅಂದ ಹೆಚ್ಚಿಸಲಾಗಿದೆ. ಭಕ್ತರ ವಾಸ್ತವ್ಯಕ್ಕೆ ನಾಲ್ಕು ಕುಟೀರ ನಿರ್ಮಿಸಲಾಗಿದೆ. ಮಕ್ಕಳು ಆಟವಾಡಲು ಜೋಕಾಲಿ, ಜಾರು ಬಂಡೆ ಇದೆ. ಮಾಸ್ತಿ ಅಮ್ಮನ ದೇವರ ಮೂರ್ತಿ ಇದೆ.

ಉದ್ಯಾನದಲ್ಲಿ ಹಾವು ಮತ್ತು ನವಿಲು ಸ್ನೇಹದಿಂದ ಇರುವ ಚಿತ್ರ ನೋಡಬಹುದು. ದೇವರ ದರ್ಶನ ಮುಗಿದ ಬಳಿಕ ಪ್ರವಾಸಿಗರು ಹಾಗೂ ಭಕ್ತರು ಉದ್ಯಾನದಲ್ಲಿ ಸ್ವಲ್ಪ ಹೊತ್ತು ವಿರಮಿಸಲು ಅವಕಾಶ ಕಲ್ಪಿಸಲಾಗಿದೆ.

ಪರಿಸರ ಸಂರಕ್ಷಿಸುವ ಸೂಕ್ತಿಗಳು ಗಮನ ಸೆಳೆಯುತ್ತವೆ. ದೇಗುಲದ ಪಕ್ಕದಲ್ಲಿರುವ ಕಲ್ಯಾಣಿ ಜೀರ್ಣೋದ್ಧಾರ ಮಾಡಿ, ಆಡಳಿತ ಕಚೇರಿ ನಿರ್ಮಿಸಲಾಗಿದೆ. ದೇಗುಲಕ್ಕೆ ಸೇರಿದ ಕಲ್ಯಾಣ ಮಂಟಪ ಇದೆ.

ತಿಪಟೂರು, ಕಾರೇಹಳ್ಳಿ ಮಾರ್ಗ, ಹಿರೀಸಾವೆ, ನುಗ್ಗೇಹಳ್ಳಿ ಮತ್ತು ಚನ್ನರಾಯಪಟ್ಟಣದಿಂದ ಬಾಗೂರು ಮಾರ್ಗದ ಮೂಲಕ ಕ್ಷೇತ್ರ ತಲುಪಬಹುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯವೂ ಇದೆ.

ದೇವಸ್ಥಾನದ ಮುಂಭಾಗದಲ್ಲಿ 500 ಮೀಟರ್ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಪ್ರತಿವರ್ಷ ಯುಗಾದಿಯ ನಂತರ ರಥೋತ್ಸವ ಜರುಗುತ್ತದೆ. ಕೆರೆ ತುಂಬಿದ ಬಳಿಕ ತೆಪ್ಪೋತ್ಸವವೂ ನಡೆಯುತ್ತದೆ.

‘ಇಲ್ಲಿ ಆಶ್ಲೇಷ ಬಲಿ ಪೂಜೆ ಮಾಡುವುದರಿಂದ ನಾಗದೋಷ ನಿವಾರಣೆಯಾಗುತ್ತದೆ. ಮಜ್ಜನ ಬಾವಿಯ ನೀರಿನ ಪ್ರೋಕ್ಷಣೆಯಿಂದ ಚರ್ಮ ರೋಗ ವಾಸಿಯಾಗುತ್ತದೆ’ ಎಂಬ ನಂಬಿಕೆ ಭಕ್ತರಲ್ಲಿದೆ. ಇಷ್ಟಾರ್ಥ ಸಿದ್ದಿಗಾಗಿ ನಾಗರಕಲ್ಲು ಪ್ರತಿಷ್ಠಾಪಿಸಲಾಗಿದೆ.

ಕ್ಷೇತ್ರದ ಅಭಿವೃದ್ಧಿಗೆ ಇಬ್ಬರು ಶಾಸಕರು, ಅಧಿಕಾರಿಗಳು ಮುತುವರ್ಜಿ ವಹಿಸಿದ್ದಾರೆ. ಜೊತೆಗೆ ದಾನಿಗಳು ಸಹ ಕೈ ಜೋಡಿಸಿದ್ದಾರೆ.

ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳು
ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಿರುವ ಜಾಗದಲ್ಲಿಯೂ ನೆರಳಿನ ವ್ಯವಸ್ಥೆ ಮಾಡಿದರೆ ದೇವರ ದರ್ಶನ ಪಡೆಯುವ ಭಕ್ತರಿಗೆ ಬಿಸಿಲಿನ ತಾಪ ತಪ್ಪಲಿದೆ. ರಾಜಗೋಪುರ ನಿರ್ಮಾಣ, ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ್ದು, ಆ ಕೆಲಸ ಆದಷ್ಟು ಬೇಗ ಆರಂಭಿಸಬೇಕಿದೆ.

‘ಅರ್ಚಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡಬೇಕು. ದೇವಸ್ಥಾನದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ಭಕ್ತರಿಗೆ ಅನುಕೂಲ. ಆಶ್ಲೇಷ ಬಲಿ ಪೂಜೆಗೆ ಬರುವವರ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಈಗಿರುವ ಪೂಜಾ ಮಂದಿರ ಚಿಕ್ಕದಾಗಿದ್ದು, ಪಕ್ಕದಲ್ಲಿ ಜಾಗ ಇರುವುದರಿಂದ ಕನಿಷ್ಠ 40 ಮಂದಿ ಕುಳಿತು ಪೂಜೆ ಮಾಡುವಂತೆ ಮಂದಿರ ನಿರ್ಮಿಸಬೇಕು’ ಎನ್ನುತ್ತಾರೆ ಸ್ಥಳೀಯರಾದ ಬಿ.ಪಿ. ನಾಗರಾಜು, ನಾಗಭೂಷಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.