ADVERTISEMENT

ಚನ್ನರಾಯಪಟ್ಟಣ: ಹೊಸಕೆರೆಯಲ್ಲಿ ಶವ ಪತ್ತೆ: ಕೊಲೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:33 IST
Last Updated 28 ಫೆಬ್ರುವರಿ 2026, 5:33 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಗೆಟ್ಟಿ ಚಿತ್ರ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲವಘಟ್ಟ ಗ್ರಾಮದ ಹೊಸಕೆರೆಯಲ್ಲಿ ಅಂತನಹಳ್ಳಿ ಗ್ರಾಮದ ಜಗದೀಶ್ (42) ಅವರ ಶವ ದೊರೆತಿದ್ದು, ಅವರನ್ನು ಕೊಲೆ ಮಾಡಿ ಕೆರೆಗೆ ಹಾಕಲಾಗಿದೆ ಎಂದು ಆರೋಪಿಸಿ ವ್ಯಕ್ತಿಯ ಪತ್ನಿ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಆರೋಪಿಗಳಾದ ಬಸವರಾಜ್ ಹಾಗೂ ಮಂಜುನಾಥ್ ಅವರು, ಜಗದೀಶ್‌ ಅವರಿಗೆ ಬಡ್ಡಿಗೆ ₹10 ಸಾವಿರ ಸಾಲ ನೀಡಿದ್ದರು. ಬಡ್ಡಿ ಸೇರಿಸಿ ₹50 ಸಾವಿರ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಜಗದೀಶ್ ಅವರಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿರುವ ಅಂತನಹಳ್ಳಿ ಗ್ರಾಮದ ಬಸವರಾಜು, ಮಂಜೇಗೌಡ, ಮಲ್ಲವಘಟ್ಟ ಗ್ರಾಮದ ದಿಲೀಪ, ಸೋಮಶೇಖರ ಎಂಬುವವರು, ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಪತ್ನಿ ಸವಿತಾ ದೂರಿನಲ್ಲಿ ತಿಳಿಸಿದ್ದಾರೆ.

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಸ್ತಿ ವಿವಾದ: ಚಿಕ್ಕಮ್ಮನ ಮೇಲೆ ಹಲ್ಲೆ

ಹಾಸನ: ತಾಲ್ಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿ, ಮನೆ ಧ್ವಂಸಗೊಳಿಸಲಾಗಿದೆ.

ಮರಿಗೌಡ ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಎರಡನೇ ಪತ್ನಿ ಅಶ್ವಿನಿ ಅವರು ಸಂಕೇನಹಳ್ಳಿಯ ಮನೆಯಲ್ಲಿ ವಾಸವಾಗಿದ್ದರು. ತಂದೆಯ ಆಸ್ತಿಯನ್ನು ಬಿಟ್ಟು ಕೊಡುವಂತೆ ಮೊದಲ ಹೆಂಡತಿಯ ಮಕ್ಕಳಾದ ಚಂದನ್ ಮತ್ತು ಚೇತನ್ ನಿತ್ಯ ಗಲಾಟೆ ನಡೆಸುತ್ತಿದ್ದರು.

ಗುರುವಾರ ರಾತ್ರಿ ಚಂದನ್ ಹಾಗೂ ಚೇತನ್, ಅಶ್ವಿನಿ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ ಮನೆಯಿಂದ ಹೊರದಬ್ಬಿದ್ದಾರೆ. ಈ ವೇಳೆ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ಪ್ರಕರಣ ದಾಖಲಾಗಿದೆ.

₹8.10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾಸನ: ಇಲ್ಲಿನ ವಲ್ಲಭಭಾಯಿ ರಸ್ತೆಯ ಇರ್ಫಾನ್‌ ಪಾಷ ಅವರ ಮನೆಗೆ ಹಿಂಬಾಗಿಲಿನಿಂದ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ₹8.10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.

ಫೆ.25 ರಂದು ರಾತ್ರಿ 11.30ರ ಸಮಯದಲ್ಲಿ ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲನ್ನು ತೆಗೆಯಲಾಗಿತ್ತು. ಹಿಂಬಾಗಿಲಿನಿಂದ ಮನೆಯ ಒಳಗೆ ಬಂದ ಅಪರಿಚಿತ ವ್ಯಕ್ತಿ, ಡ್ರೆಸ್ಸಿಂಗ್‌ ಟೇಬಲ್ ಮೇಲೆ ಇಟ್ಟಿದ್ದ 81 ಗ್ರಾಂ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾನೆ. ಪೆನ್ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.