ADVERTISEMENT

ಚನ್ನರಾಯಪಟ್ಟಣ ನಡುವೆ ಸಾಹಿತಿ ಎಸ್.ಎಲ್.ಭೈರಪ್ಪ ಅವಿನಾಭಾವ ಸಂಬಂಧ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 5:42 IST
Last Updated 25 ಸೆಪ್ಟೆಂಬರ್ 2025, 5:42 IST
ಚನ್ನರಾಯಪಟ್ಟಣದಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ, ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಮತ್ತು ಅಭಿಮಾನಿಗಳು ಪುಷ್ಪಾರ್ಚನೆ ನೆರವೇರಿಸಿ ನಮಿಸಿದರು
ಚನ್ನರಾಯಪಟ್ಟಣದಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ, ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಮತ್ತು ಅಭಿಮಾನಿಗಳು ಪುಷ್ಪಾರ್ಚನೆ ನೆರವೇರಿಸಿ ನಮಿಸಿದರು   

ಚನ್ನರಾಯಪಟ್ಟಣ: ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ಚನ್ನರಾಯಪಟ್ಟಣ ನಡುವೆ ಅವಿನಾಭಾವ ಸಂಬಂಧ ಇತ್ತು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಕೆ.ಆರ್. ವೃತ್ತದ ಬಳಿ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಬುಧವಾರ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಬಾಗೂರು ಮತ್ತು ಚನ್ನರಾಯಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು. ಚನ್ನರಾಯಟ್ಟಣದಲ್ಲಿ ವಾರಾನ್ನದ ಮೂಲಕ ವಿದ್ಯಾಭ್ಯಾಸ ಮಾಡಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ‘ಸರಸ್ವತಿ ಸಮ್ಮಾನ್’, ‘ಪದ್ಮಶ್ರೀ’, ‘ಪದ್ಮಭೂಷಣ’ ಸೇರಿ ಹಲವಾರು ಪ್ರಶಸ್ತಿ ಗಳಿಸಿದ್ದರು’ ಎಂದು ಹೇಳಿದರು. ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಂತೇಶಿವರ ಗ್ರಾಮಕ್ಕೆ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಅದರಂತೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಕರಿಸಿದ್ದರು. ಯೋಜನೆ ಸಾಕಾರಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚಿಯಲ್ಲಿ ಗ್ರಾಮದಲ್ಲಿ ಭೈರಪ್ಪ ಅವರಿಗೆ ಸನ್ಮಾನ ಏರ್ಪಡಿಸಲಾಗಿತ್ತು’ ಎಂದು ಹೇಳಿದರು.

‘ಸಂತೇಶಿವರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ಆಪ್ತರ ಬಳಿ ಭೈರಪ್ಪ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದರು.

ADVERTISEMENT

ಸಮಾಜಸೇವಕ ಸುಬ್ಬಣ್ಣ ಮಾತನಾಡಿ, ‘ಚನ್ನರಾಯಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯ ಆರಂಭವಾಗುವುದಕ್ಕೆ ಭೈರಪ್ಪ ಅವರ ಶ್ರಮ ಕಾರಣ. ಒಮ್ಮೆ ಸಾರ್ವಜನಿಕರ ಸಮಾರಂಭದಲ್ಲಿ ಚನ್ನರಾಯಪಟ್ಟಣದಲ್ಲಿ ಗ್ರಂಥಾಲಯ ಇಲ್ಲದಿರುವ ಬಗ್ಗೆ ಜನಪ್ರತಿನಿಧಿಯ ಗಮನ ಸೆಳೆದಿದ್ದರು. ಆ ನಂತರ ತಾಲ್ಲೂಕು ಬೋರ್ಡ್ ಕಚೇರಿಯಲ್ಲಿ ಗ್ರಂಥಾಲಯ ಆರಂಭಿಸಿದ್ದರು’ ಎಂದು ಅವರು ಸ್ಮರಿಸಿಕೊಂಡರು.

ಸಾಹಿತ್ಯದ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಂಡರು. ಸದಾ ಕ್ರಿಯಾಶೀಲರಾಗಿದ್ದರು. ಅವರ ಬದುಕು ನಮ್ಮೆಲ್ಲರಿಗೆ ಸ್ಪೂರ್ತಿ ಎಂದರು. ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಮಾತನಾಡಿದರು. ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ಕವಿತಾ, ಪರಿಸರವಾದಿ ಸಿ.ಎನ್. ಅಶೋಕ್, ಮುಖಂಡರಾದ ಚಂದ್ರುಕಾಳೇನಹಳ್ಳಿ, ನಾರಾಯಣ್, ರಘು, ಸಿ.ಟಿ. ಕುಮಾರಸ್ವಾಮಿ, ಬೆಳಗಿಹಳ್ಳಿ ಪುಟ್ಟಸ್ವಾಮಿ, ವೆಂಕಟೇಶ್‍ಪ್ರಸಾದ್, ಎಚ್.ಎಂ. ಶ್ರೀಕಂಠ, ಟಿಎಪಿಸಿಎಂ.ಎಸ್ ಅಧ್ಯಕ್ಷ ಎಂ.ಆರ್. ಅನಿಲ್‍ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.