ADVERTISEMENT

International Yoga Day: 2.5 ಲಕ್ಷ ಜನರಿಗೆ ಯೋಗ ಕಲಿಸಿದ ಚೇತನ್ ಗುರೂಜಿ

20 ವರ್ಷಗಳಿಂದ ಯೋಗದ ತರಬೇತಿ: ನೇತ್ರದಾನ, ದೇಹದಾನ, ರಕ್ತದಾನದ ಜಾಗೃತಿ

ಎಚ್.ಎಸ್.ಅನಿಲ್ ಕುಮಾರ್
Published 21 ಜೂನ್ 2025, 5:56 IST
Last Updated 21 ಜೂನ್ 2025, 5:56 IST
ಜಾನಶಿರಶಾಸನ ಮಾಡುತ್ತಿರುವ ಚೇತನ್‌ ಗುರೂಜಿ
ಜಾನಶಿರಶಾಸನ ಮಾಡುತ್ತಿರುವ ಚೇತನ್‌ ಗುರೂಜಿ   

ಹಳೇಬೀಡು: ಅಡಗೂರು ಗ್ರಾಮದಲ್ಲಿ ಯೋಗ ಚೇತನ ಕೇಂದ್ರ ನಡೆಸುತ್ತಿರುವ ಚೇತನ್ ಗುರೂಜಿ, 2.5 ಲಕ್ಷ ಜನರಿಗೆ ಯೋಗ ಕಲಿಸಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.

ಚೇತನ್ ಅವರು 20 ವರ್ಷದಿಂದ ಜನರಿಗೆ ಯೋಗದ ಮಹತ್ವ ತಿಳಿಸುತ್ತಿದ್ದು, ಯೋಗ ತರಬೇತಿ ನೀಡುತ್ತಿದ್ದಾರೆ. ಧಾರವಾಡ ಮನುಗುಂಡಿಯ ಬಸವಾನಂದ ಸ್ವಾಮೀಜಿ ಅವರಿಂದ ಪ್ರೇರಿತರಾಗಿರುವ ಅವರು, ರಾಜ್ಯದಾದ್ಯಂತ ವಿವಿಧ ಊರುಗಳಲ್ಲಿ 390 ಶಿಬಿರ ನಡೆಸಿದ್ದಾರೆ.

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಶಿಷ್ಯರಾದ ಅಶೋಕ್ ಹೊಸಮನಿ, ಚಿನ್ಮಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನು ಮೂರು ವರ್ಷ ಕಲಿತ ನಂತರ ಚೇತನ್ ಯೋಗ ಗುರುವಾಗಿ ಹೊರಹೊಮ್ಮಿದ್ದಾರೆ.

ADVERTISEMENT

ಯೋಗದಿಂದ ಶರೀರಕ್ಕೆ ಆಗುವ ಉಪಯೋಗ ಹಾಗೂ ಔಷಧ ರಹಿತವಾಗಿ ಬದುಕುವ ಜೀವನ ಶೈಲಿಯನ್ನು ಜನರಿಗೆ ಪರಿಚಯ ಮಾಡಿಕೊಂಡು ಬಂದಿದ್ದೇನೆ. ಸಾವಿರಾರು ಕುಟುಂಬಗಳು ಯೋಗ ಕರಗತ ಮಾಡಿಕೊಂಡು ಸ್ವಚ್ಛಂದ ಜೀವನ ಸಾಗಿಸುತ್ತಿವೆ‌. ಲಕ್ಷಾಂತರ ಮಂದಿಗೆ ಯೋಗ ಕರಗತ ಮಾಡಿರುವುದು ನನ್ನ ಮನಸ್ಸಿಗೆ ಹಿತ ನೀಡುತ್ತಿದೆ ಎನ್ನುತ್ತಾರೆ ಚೇತನ್.

ಒತ್ತಡ ಬದುಕಿನ ಪೋಲಿಸರು, ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರಿಗೆ ಯೋಗ ಹಾಗೂ ಧ್ಯಾನ ಕುರಿತು ಚಿಂತನೆ ಮಾಡುವಂತೆ ಉಪನ್ಯಾಸ ಮಾಡಿದ್ದೇನೆ. ಹಳೇಬೀಡು, ಅರೇಹಳ್ಳಿ ಪೊಲೀಸ್‌ ಠಾಣೆ ಹಾಗೂ ಹಾಸನದ ರಾಜ್ಯ ಸಾರಿಗೆ ಸಂಸ್ಥೆಯ ಘಟಕಗಳಲ್ಲಿ ಸಿಬ್ಬಂದಿಗೆ ಉಪನ್ಯಾಸ ಮಾಡಿದ್ದರಿಂದ ಎರಡೂ ಇಲಾಖೆಯ ಅಧಿಕಾರಿಗಳು ಗೌರವಿಸಿದ್ದಾರೆ ಎಂದು ಹೇಳಿದರು.

ಶಾಲಾ, ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಯೋಗದಿಂದ ಆರೋಗ್ಯ ಪಡೆಯುವ ಕುರಿತು ಉಪನ್ಯಾಸ ಮಾಡಿದ್ದೇನೆ. ಯೋಗ ಧ್ಯಾನದ ಜೊತೆ ಮನೆ ಮದ್ದಿನಿಂದ ಆರೋಗ್ಯಕರ ಜೀವನ ಪಡೆಯುವುದನ್ನು ಜನರಿಗೆ ಮನವರಿಕೆ ಮಾಡಿದ್ದೇನೆ ಎಂದು ಚೇತನ್ ಗುರೂಜಿ ಹೇಳುತ್ತಾರೆ.

ಚೇತನ್ ಗುರೂಜಿ ಯೋಗದ ವಿವಿಧ ಆಸನಗಳು ಶಿಬಿರಾರ್ಥಿಗಳ ಕಲಿಕೆಗೆ ಸುಲಭ ಆಗುವಂತೆ ಹೇಳಿಕೊಡುತ್ತಾರೆ. ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಾಗಾರಗಳಲ್ಲಿ ಸಾವಿರಾರು ಸದಸ್ಯರಿಗೆ ಯೋಗ ಕಲಿಸಿದ್ದಾರೆ.
– ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಮಠ

ಬೆನ್ನುತಟ್ಟಿದ ಮಠಾಧೀಶರು

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹರಿಹರ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ನನ್ನ ಯೋಗದ ಆಸಕ್ತಿಯನ್ನು ಗಮನಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ ಎಂದರು ಚೇತನ್ ಗುರೂಜಿ. ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಸಹಕಾರವನ್ನು ಮರೆಯುವಂತಿಲ್ಲ. ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವಸಹಾಯ ಸಂಘದ ಕಾರ್ಯಾಗಾರಗಳಲ್ಲಿ ಯೋಗ ತರಬೇತಿ ನೀಡಲು ಅವಕಾಶ ಕಲ್ಪಿಸಿದ್ದಾರೆ. ತಾಯಿ ಭಾಗೀರಥಿ ತಂದೆ ರಾಜಶೇಖರ್ ಪತ್ನಿ ಬಿಂದುರಾಣಿ ವಿ.ಎಸ್. ಯೋಗ ಸಾಧನೆಗೆ ಬೆನ್ನೆಲುಬಾಗಿ ಸಹಕರಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಯೋಗದ ಜೊತೆ ರಕ್ತದಾನ

98 ಬಾರಿ ಸ್ವತಃ ರಕ್ತದಾನ ಮಾಡಿದ್ದೇನೆ. ಶಿಬಿರದ ಮೂಲಕ 10 ಸಾವಿರ ಬಾಟಲಿ ರಕ್ತ ಸಂಗ್ರಹಿಸಲು ಶ್ರಮವಹಿಸಿದ್ದೇನೆ. ಈವರೆಗೆ ವಿವಿಧ ಸಂಘ–ಸಂಸ್ಥೆ ಆಶ್ರಯದಲ್ಲಿ 200 ರಕ್ತದಾನ ಶಿಬಿರ ನಡೆಸಿದ್ದೇನೆ. ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜನರಲ್ಲಿ ದೇಹದಾನದ ಮಹತ್ವ ತಿಳಿಸುವತ್ತ ಹೆಜ್ಜೆ ಹಾಕಿದ ಪರಿಣಾಮ 30 ಮಂದಿ ದೇಹದಾನ ವಾಗ್ದಾನ ಪತ್ರಕ್ಕೆ ಸಹಿ ಮಾಡಿದ್ದಾರೆ. ಕಣ್ಣಿನ ಮಹತ್ವ ತಿಳಿಸಿದ್ದರಿಂದ 250 ಮಂದಿ ನೇತ್ರದಾನ ಮಾಡಲು ಪಣತೊಟ್ಟಿದ್ದಾರೆ ಎನ್ನುತ್ತಾರೆ ಚೇತನ್ ಗುರೂಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.