ರಾಜ್ಯದ 17 ಜಿಲ್ಲೆಗಳಲ್ಲಿ ತೆಂಗು ಬೆಳೆ 10-12 ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ | ತೆಂಗು ಬೆಳೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ
ಚನ್ನರಾಯಪಟ್ಟಣ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮತ್ತು ತೆಂಗಿನ ಕಾಯಿಯನ್ನು ವರ್ಷಪೂರ್ತಿ ಖರೀದಿಸುಂತಾಗಬೇಕು ಎಂದು ಬೆಲೆ ಕಾವಲು ಸಮಿತಿ ರಾಜ್ಯಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ಸಿಐಟಿಯು ವತಿಯಿಂದ ತೆಂಗು ಬೆಳೆಗಾರರ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ರೈತರು ಬೆಳೆದ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಮೂಲಕ ಅವರ ನೆರವಿಗೆ ಧಾವಿಸಬೇಕು. ತುಮಕೂರು, ಹಾಸನ, ಮಂಡ್ಯ ಜಿಲ್ಲೆ ಸೇರಿ 17 ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. 10-12 ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಕೊಬ್ಬರಿ ಮತ್ತು ತೆಂಗು ಬೆಳೆಯ ಖರೀದಿಯ ಮಾನದಂಡ ಬದಲಾಗಬೇಕು. ಮಾರುಕಟ್ಟೆಯ ಹರಾಜು ಪ್ರಕ್ರಿಯೆ, ಮಾರುಕಟ್ಟೆಯ ಕೌಶಲದ ಬಗ್ಗೆ ರೈತರಿಗೆ ಅರಿವು ಇರಬೇಕು’ ಎಂದರು.
‘ತೆಂಗು ಬೆಳೆ ಜತೆ ಅಂತರ ಬೆಳೆಗಳನ್ನು ಬೆಳೆಯುವುದರಿಂದ ರೈತಾಪಿ ವರ್ಗದವರ ಆದಾಯ ಹೆಚ್ಚಾಗುತ್ತದೆ. ಕೊಬ್ಬರಿ ಮತ್ತು ತೆಂಗು ಉತ್ಪನ್ನದ ಆಹಾರ ಮೇಳ ಆಯೋಜಿಸಬೇಕು. ಅಹಾರ ಉತ್ಪನ್ನಗಳನ್ನು ಮಾರಾಟ ಮಾಡಬೇಕು’ ಎಂದು ಹೇಳಿದರು.
ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಚೈತನ್ಯಕುಮಾರ್ ಮಾತನಾಡಿ, ‘ಗುಣಮಟ್ಟದ ತೆಂಗಿನ ಸಸಿ ತಳಿಗಳನ್ನು ನಾಟಿಮಾಡಬೇಕು. ಬೆಳೆಗಾರರಿಗೆ ಸರ್ಕಾರದಿಂದ ಸಾಲ ಸೌಲಭ್ಯ ದೊರಕುವಂತಾಗಬೇಕು. ತೆಂಗು ಇಳುವರಿ ಹೆಚ್ಚಿಸುವ ತಂತ್ರಜ್ಞಾನ ಮತ್ತು ಕೌಶಲ ಕುರಿತು ತಿಳಿವಳಿಕೆ ನೀಡಬೇಕು. ತೆಂಗು ಬೆಳೆಯುವಲ್ಲಿ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ’ ಎಂದು ಹೇಳಿದರು.
ತೆಂಗುಬೆಳೆಗಾರರ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ‘ರೈತರ ಪಾಲಿಗೆ ಕಲ್ಪವೃಕ್ಷವಾದ ತೆಂಗುಬೆಳೆಯನ್ನು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 50 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಗರಿರೋಗ, ಕಾಂಡಕೊರಕ, ಕಪ್ಪುತಲೆ ರೋಗದಿಂದ ಶೇ 50 ರಷ್ಟು ಇಳುವರಿ ಕುಂಟಿತವಾಗಿದೆ’ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಕಿರಣ್, ಸಿಐಟಿಯು ಉಪಾಧ್ಯಕ್ಷ ಎಚ್.ಎಸ್. ಮಂಜುನಾಥ್, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‍ಕುಮಾರ್ ಮಾತನಾಡಿದರು.
ವಿಚಾರ ಸಂಕಿರಣದ ಸಿದ್ದತಾ ಸಮಿತಿಯ ಗೌರವಾಧ್ಯಕ್ಷ ಸಿ ಆರ್. ಶಂಕರ್, ಪ್ರಧಾನಕಾರ್ಯದರ್ಶಿ ಜೆ.ಎನ್. ಚಂದ್ರಹಾಸ, ನಿವೃತ್ತ ಪ್ರಾಂಶುಪಾಲ ಮೇಟಿಕೆರೆ ಹಿರಿಯಣ್ಣ, ರೈತಸಂಘದ ಮುಖಂಡರಾದ ಸುಜಾತಾ, ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರಸಂಘದ ಅಧ್ಯಕ್ಷ ಕರಿಯಪ್ಪ ಭಾಗವಹಿಸಿದ್ದರು.
ತೆಂಗು ಬೆಳೆಗಾರರಿಗೆ ಬೆಳೆಯ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸುವಂತಾಗಬೇಕುಶ್ರೀಕಾಂತ್ ಕೆಳಹಟ್ಟಿ ಬೆಲೆ ಕಾವಲು ಸಮಿತಿ ರಾಜ್ಯಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.