ADVERTISEMENT

ಮಾಲೀಕನ ಮೇಲೆ ಹಲ್ಲೆ ಮಾಡಿ ಕಾಫಿ ಕಳವು: ಪರಿಚಿತರಿಂದಲೇ ಕೃತ್ಯ; ಮನೆಯವರ ಆಕ್ರೋಶ

ಮಾಲೀಕನ ಮೇಲೆ ಹಲ್ಲೆ ಮಾಡಿ ಕಾಫಿ ಕಳವು ಮಾಡಿದ್ದ 6 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 8:32 IST
Last Updated 14 ಡಿಸೆಂಬರ್ 2025, 8:32 IST
ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸರು, ಕಾಫಿ ಬೀಜ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ
ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸರು, ಕಾಫಿ ಬೀಜ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ   

ಬೇಲೂರು: ತಾಲ್ಲೂಕಿನ ಅರೇಹಳ್ಳಿ ವ್ಯಾಪ್ತಿಯ ಉಲ್ಲಾಸ್ ನಗರದ ಜಗನ್ನಾಥ್ ಶೆಟ್ಟಿ ಎಂಬುವರ ಕಾಫಿ ಕಣದಲ್ಲಿ ಲಕ್ಷಾಂತರ ಮೌಲ್ಯದ ಕಾಫಿಯನ್ನು ಕಳವು ಮಾಡಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಸೈಯದ್ ಮುಬಾರಕ್, ಶಹೀಬ್ ಅಹ್ಮದ್, ಅಬ್ದುಲ್ ಅಜೀಜ್, ಸಾಗರ್, ಪ್ರಜ್ವಲ್ ಎಂಬುವವರು ಕಾಫಿ ಬೀಜ ಕಳವು ಮಾಡಿದ್ದು, ಸುನಿಲ್ ಕುಮಾರ್ ಎಂಬಾತ ಕದ್ದ ಕಾಫಿಯನ್ನು ಖರೀದಿ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

ಶನಿವಾರ ಸ್ಥಳ ಮಹಜರಿಗಾಗಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆ ತಂದಿದ್ದರು. ತಕ್ಷಣ ಇಬ್ಬರನ್ನು ಗುರುತಿಸಿದ ಜಗನ್ನಾಥ್ ಶೆಟ್ಟಿ ಅವರ ಪತ್ನಿ, ಆಳುತ್ತಾ ಚೀರಾಡುವ ದೃಶ್ಯ ಮನ ಮುಟ್ಟುವಂತಿತ್ತು.

ADVERTISEMENT

ಆರೋಪಿಗಳಲ್ಲಿ ಇಬ್ಬರು ನಿತ್ಯ ಕಾಣಿಸಿಕೊಳ್ಳುವ ಅದೇ ಬೀದಿಯವರಾಗಿದ್ದರು. ಅವರೊಂದಿಗೆ ಉತ್ತಮ ಬಾಂಧವ್ಯವೂ ಇತ್ತು. ಉಂಡ ಮನೆಗೆ ದ್ರೋಹ ಎಸಗಿದ್ದಾರೆ ಎಂಬ ವೇದನೆ ಹೊರಹಾಕಿದರು.

ಕಳೆದ ಭಾನುವಾರ 4–5 ಜನರಿದ್ದ ಗುಂಪು ಕಾಫಿ ದೋಚಿ ಪರಾರಿಯಾಗಿತ್ತು. ಆರೋಪಿಗಳನ್ನು ಬಂಧಿಸುವಂತೆ ಕಾಫಿ ಬೆಳೆಗಾರರ ಸಂಘ ಪೊಲೀಸರಲ್ಲಿ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಗುರುವಾರ ಬೆಳಿಗ್ಗೆ 4.30ರ ಸುಮಾರಿಗೆ ಅದೇ ಗುಂಪು ಮತ್ತೆ ಕಾಫಿ ದೋಚಲು ಯತ್ನಿಸಿದ್ದು, ಅಡ್ಡ ಬಂದ ಮಾಲೀಕ ಜಗನ್ನಾಥ್‌ ಶೆಟ್ಟಿಯವರ ಮೇಲೆ ಬ್ಯಾಟ್ ಹಾಗೂ ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಿತ್ತು. ಬಂದೂಕು ಹಾಗೂ ಕಾಫಿ ದೋಚಿ ಪರಾರಿಯಾಗಿತ್ತು. ಸ್ಥಳಕ್ಕೆ ಎಸ್ಪಿ ಮೊಹಮ್ಮದ್‌ ಸುಜೀತಾ ಭೇಟಿ ನೀಡಿ ಪರಿಶೀಲಿಸಿದ್ದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಜಗದೀಶ್, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸುರೇಶ್, ಎಸ್.ಜಿ.ಪಾಟೀಲ್, ಸಿಬ್ಬಂದಿ ಸಂಶುದ್ದೀನ್, ಸುಪ್ರೀತ್, ಅವಿನಾಶ್, ನಂದೀಶ್, ಶಶಿಕುಮಾರ್, ಮಂಜುನಾಥ್, ಹೇಮಕಾಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.