ADVERTISEMENT

ಹಾಸನ: ಸೌಕರ್ಯ ಇಲ್ಲದಿದ್ದರೂ ಸುಂಕ ವಸೂಲಿ

ನಗರಸಭೆ ಕಾರ್ಯವೈಖರಿಗೆ ರೈತರು, ವರ್ತಕರು, ನಾಗರಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 6:23 IST
Last Updated 16 ಏಪ್ರಿಲ್ 2025, 6:23 IST
ಸಂತೆಯ ದಿನ ಹಾಸನದ ಸಾಲಗಾಮೆ ರಸ್ತೆಯಲ್ಲಿ ಉಂಟಾಗುವ ವಾಹನ ದಟ್ಟಣೆ
ಸಂತೆಯ ದಿನ ಹಾಸನದ ಸಾಲಗಾಮೆ ರಸ್ತೆಯಲ್ಲಿ ಉಂಟಾಗುವ ವಾಹನ ದಟ್ಟಣೆ   

ಹಾಸನ: ನಗರದಲ್ಲಿ ವಾರದ ಸಂತೆ ನಡೆಸಲು ರೈತರಿಗೆ ಹಾಗೂ ತರಕಾರಿ ಮಾರಾಟಗಾರರಿಗೆ ಸೂಕ್ತ ಸ್ಥಳ ದೊರೆಯದೇ ಪರದಾಡುವಂತಾಗಿದೆ. ಈ ಮಧ್ಯೆ ಯಾವುದೇ ಮೂಲ ಸೌಲಭ್ಯ ನೀಡದೇ ಇದ್ದರೂ, ಸುಂಕ ವಸೂಲಿಗೆ ಮುಂದಾಗಿರುವ ನಗರಸಭೆ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಸಾಲಗಾಮೆ ರಸ್ತೆಯ ಅಕ್ಕಪಕ್ಕದಲ್ಲಿ ಹಲವು ವರ್ಷಗಳಿಂದ ಸ್ಥಳೀಯ ರೈತರು ಹಾಗೂ ತರಕಾರಿ ಮಾರಾಟಗಾರರು ಪ್ರತಿ ಮಂಗಳವಾರ ಸಂತೆ ಮಾಡುತ್ತಾರೆ. ಇನ್ನೊಂದೆಡೆ ಡೇರಿ ವೃತ್ತದಿಂದ ರೈಲು ನಿಲ್ದಾಣದವರೆಗೂ ಇರುವ ರಸ್ತೆಯ ಅಕ್ಕಪಕ್ಕದಲ್ಲೂ ತರಕಾರಿ ಮಾರಾಟ ನಡೆಯುತ್ತಿದೆ.

ಆದರೆ ಈ ಎರಡೂ ಕಡೆ ನಗರಸಭೆಯಿಂದ ಕನಿಷ್ಠ ಸೌಕರ್ಯ ಒದಗಿಸಿಲ್ಲ. ರೈತರಿಗೆ, ವರ್ತಕರಿಗೆ, ಗ್ರಾಹಕರಿಗೆ ಶೌಚಾಲಯ, ಕುಡಿಯುವ ನೀರು, ತರಕಾರಿ ಮಾರಾಟ ಮಾಡುವವರಿಗೆ ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಆದರೂ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಸಾಲಗಾಮೆ ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುವವರ ಪರಿಸ್ಥಿತಿ ಹೇಳತೀರದಾಗಿದೆ. ರಸ್ತೆಯ ಪಕ್ಕದಲ್ಲಿಯೇ ಯುಜಿಡಿ ಪೈಪ್‌ಲೈನ್‌ ಒಡೆದಿದ್ದು, ಈ ಕಲುಷಿತ ನೀರು ಹರಿಯುವ ಸ್ಥಳದಲ್ಲಿಯೇ ತರಕಾರಿ ಮಾರಾಟ ಮಾಡಲಾಗುತ್ತಿದೆ. ದುರ್ವಾಸನೆ ಸಹಿಸಿಕೊಂಡೇ ವ್ಯಾಪಾರಿಗಳು, ಗ್ರಾಹಕರು ಸಂತೆಗೆ ಬರುವಂತಾಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಆಕ್ರೋಶ ನಾಗರಿಕರದ್ದು.

ಫುಟ್‌ಪಾತ್ ಮೇಲೆ ತರಕಾರಿ ಮಾರಾಟ ಮಾಡಬಹುದು. ಆದರೆ ಬಹುತೇಕ ರೈತರು ಹಾಗೂ ತರಕಾರಿ ಮಾರಾಟಗಾರರು ರಸ್ತೆಯಲ್ಲಿಯೇ ಅಂಗಡಿ ಹಾಕುತ್ತಿದ್ದು, ಸುಗಮ ಸಂಚಾರಕ್ಕೂ ತೊಂದರೆಯಾಗುತ್ತಿದೆ. ತರಕಾರಿ ಕೊಳ್ಳಲು ಬರುವ ಗ್ರಾಹಕರೂ ರಸ್ತೆ ಮಧ್ಯದಲ್ಲಿಯೇ ಕಾರು, ಬೈಕ್ ನಿಲ್ಲಿಸುತ್ತಿದ್ದಾರೆ.

ಸಾಲಗಾಮೆ ರಸ್ತೆ ಹಾಗೂ ಡೇರಿ ವೃತ್ತದ ಸಮೀಪ ವಾರದ ಸಂತೆ ನಡೆಯುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಕೆಲ ತಿಂಗಳ ಹಿಂದೆಯೇ ವರದಿ ಪ್ರಕಟವಾಗಿತ್ತು. ಸಂತೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಆಗಿಲ್ಲ ಎಂದು ಸ್ಥಳೀಯ ಜನರು ದೂರುತ್ತಿದ್ದಾರೆ.

ಟ್ರಾಫಿಕ್ ಸಮಸ್ಯೆ ಸಂಬಂಧ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಅಗತ್ಯ ಫೋಟೋ ಹಾಗೂ ಮಾಹಿತಿ ಸಂಗ್ರಹಿಸಿದ್ದಾರೆ. ಆದರೂ ಸಂತೆ ಮುಂದುವರಿದಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ರೈತರಿಂದ ವಸೂಲಿ ಮಾಡುವ ಸುಂಕದ ರಸೀದಿ
ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿವೆ. ಸಂತೆ ಸಮಸ್ಯೆ ಹಾಗೂ ಸುಂಕ ವಸೂಲಿ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ರಮೇಶ್‌ ಪ್ರಭಾರ ಆಯುಕ್ತ
ಸೌಕರ್ಯ ಕಲ್ಪಿಸದೇ ಸುಂಕ ವಸೂಲಿ ಮಾಡಲಾಗುತ್ತಿದೆ. ಬಡ ರೈತರು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ.
ರಂಗಸ್ವಾಮಿ ಸಾಲಗಾಮೆ ರೈತ
ಬೇಕಾಬಿಟ್ಟಿ ಸುಂಕ ವಸೂಲಿ
ನಗರದ ಯಾವುದೇ ಮಾರುಕಟ್ಟೆ ವಾಣಿಜ್ಯ ಸ್ಥಳದಲ್ಲಿ ನಗರಸಭೆ ಸುಂಕ ವಸೂಲಿ ಮಾಡುತ್ತಿದ್ದರೆ ಅಲ್ಲಿ ಮೂಲಸೌಕರ್ಯ ಒದಗಿಸಬೇಕು. ಪ್ರತಿಯೊಬ್ಬರಿಗೂ ಸುಂಕದ ರಸೀದಿ ನೀಡಬೇಕು. ಆದರೆ ಹಲವರಿಗೆ ಸುಂಕದ ಚೀಟಿ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ರೈತರು ಹಾಗೂ ರಸ್ತೆ ಬದಿ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡದಂತೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಸೂಚನೆ ನೀಡಿದ್ದರು. ಕೆಲ ದಿನಗಳ ಹಿಂದೆ ನಗರಸಭೆ ಅಧಿಕಾರಿಗಳು ಟೆಂಡರ್ ಕರೆದು ಸುಂಕ ವಸೂಲಿ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.