ADVERTISEMENT

ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರುತ್ತಿದ್ದಾರೆ: ಸಂಸದ ಪ್ರಜ್ವಲ್ ರೇವಣ್ಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 14:15 IST
Last Updated 14 ಏಪ್ರಿಲ್ 2024, 14:15 IST
ಅರಸೀಕೆರೆ ನಾಗಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಗಸಮುದ್ರ ಸ್ವಾಮಿ ಮತ್ತು ಬೆಂಬಲಿಗರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮುಖಂಡರು ಉಪಸ್ಥಿತರಿದ್ದರು
ಅರಸೀಕೆರೆ ನಾಗಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಗಸಮುದ್ರ ಸ್ವಾಮಿ ಮತ್ತು ಬೆಂಬಲಿಗರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮುಖಂಡರು ಉಪಸ್ಥಿತರಿದ್ದರು   

ಅರಸೀಕೆರೆ: ‘ಕ್ಷೇತ್ರದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ದರ್ಪದ ಕಾರ್ಯರೂಪವನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರುತ್ತಿದ್ದಾರೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಗಸಮುದ್ರ ಸ್ವಾಮಿ ಮತ್ತು ಬೆಂಬಲಿಗರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಾಭಿಮಾನ ಇರುವ ವ್ಯಕ್ತಿ ಯಾರೂ ಕೆ.ಎಂ. ಶಿವಲಿಂಗೇಗೌಡರ ಜತೆಯಲ್ಲಿ ಇರಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಗೆ ಬುದ್ದಿ ಕಲಿಸುವ ಕಾರ್ಯವನ್ನು ಈ ಚುನಾವಣೆಯಲ್ಲಿ ಮತದಾರರು ಮಾಡುವ ಅವಶ್ಯಕತೆ ಇದೆ. ನಮ್ಮ ಪಕ್ಷಕ್ಕೆ ಬರುವವರಿಗೆ ಹೆಚ್ಚಿನ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುತ್ತೇವೆ’ ಎಂದರು.

‘ಈ ಚುನಾವಣೆ ದರ್ಪದ ಮತ್ತು ಸ್ವಾಭಿಮಾನದ ಯುದ್ಧವಾಗಿ ಪರಿಣಮಿಸಿದೆ. ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳನ್ನು ತಿರುಗಿದ್ದೇನೆ. ಇಲ್ಲಿ ಶಾಸಕರು ಬಡವರ, ರೈತರ, ಜನರ ಕಣ್ಣೀರು ಹಾಕಿಸಿದ್ದಾರೆ. ನೊಂದಿರುವ ಜೀವಗಳು ಈ ಚುನಾವಣೆಯಲ್ಲಿ ಉತ್ತರಿಸಲಿದ್ದಾರೆ. ಕೆ.ಎಂ. ಶಿವಲಿಂಗೇಗೌಡ ಯಾವುದೇ ಕಾರಣಕ್ಕೂ ಯಾರನ್ನು ಬೆಳೆಸಲು ಮುಂದಾಗಿಲ್ಲ, ಹೊಸ ಗೂಟದ ಕಾರನ್ನು ನೋಡಿದ ಕ್ಷಣ ತಾವೇ ಹತ್ತಿ ಕುಳಿತವರು ಇವರು’ ಎಂದರು.

ADVERTISEMENT

ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ‘ಕೆ.ಎಂ. ಶಿವಲಿಂಗೇಗೌಡರು ಆಡಳಿತ ಪಕ್ಷದ ಶಾಸಕನಾಗಿ 10 ತಿಂಗಳಲ್ಲಿ ಯಾವುದೇ ನೀರಾವರಿ ಬಗ್ಗೆ ಮಾತನಾಡಿಲ್ಲ. ರಾಜ್ಯಕ್ಕೆ ಬರ ತರುವ, ನೀರನ್ನೂ ಇಲ್ಲದಂತಾಗುವ ಪಕ್ಷ ಕಾಂಗ್ರೆಸ್ ಆಗಿದೆ. ಅಭಿವೃದ್ಧಿಗೆ ಹಣ ಇಲ್ಲದ ಸರ್ಕಾರ ಕಿತ್ತು ಹಾಕಬೇಕಿದೆ. ಇದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ನಾಗಲೋಟದ ಮತ ನೀಡೋಣ’ ಎಂದರು.

ನಾಗಸಮುದ್ರ ಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡ ಶಶಿಧರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ರಾಂಪುರ ಶೇಖರಪ್ಪ, ಪಿಎಲ್‍ಡಿ ಬ್ಯಾಂಕ್ ಗಂಗಾಧರ್, ನಿರಂಜನ್, ಬಾಣಾವರ ಅಣ್ಣಿ, ಉಮೇಶ್, ದಯಾ, ಹನುಮಂತಣ್ಣ, ರಾಜಣ್ಣ, ಚಂದ್ರಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.