
ಹಾಸನ: ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ ಖಂಡಿಸಿ ಎಸ್‌ಡಿಪಿಐ ಸದಸ್ಯರು ನಗರದ ಹೇಮಾವತಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ಮುಖಂಡ ಫೈರೋಜ್ ಪಾಷಾ ಮಾತನಾಡಿ, ‘ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಗೌಡ, ಹಿಂದುತ್ವ ಪರ ಸಂಘಟನೆಯಿಂದ ಹತ್ಯೆಯಾಗಿರುವ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಮಾತನಾಡದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಹೇಗೆ ರಕ್ಷಣೆ, ನ್ಯಾಯ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.
‘ಗಣೇಶ್ ಗೌಡ ಹಿಂದೂ ಯುವಕನಾಗಿದ್ದು, ಹಿಂದುತ್ವ ಪರ ನಾಯಕರು ಧ್ವನಿ ಎತ್ತುತ್ತಿಲ್ಲ. ಸಿ.ಟಿ. ರವಿ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಕೇವಲ ತಮ್ಮ ಪಕ್ಷದ ಕಾರ್ಯಕರ್ತನಾದರೆ ಮಾತ್ರ ಶವಯಾತ್ರೆ ನಡೆಸಿ, ಬಂದ್ ಮಾಡಿ ವಿಷ ಬೀಜ ಬಿತ್ತಿ ರಾಜಕೀಯ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಆರೋಪಿಗಳ ಮೇಲೆ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯಕ್ಕೆ ವರ್ಗಾಯಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಶಾಜಿಲ್ ಅಹಮದ್, ಸೈಯ್ಯದ್ ಫರಿದ್, ಖಾಜಿಮ್, ಅಮೀರ್ ಜಾನ್, ಫೈರೋಜ್, ಸೈಯ್ಯದ್ ನದಿಮ್, ವಾಜೀದ್, ಯಾಸಿನ್, ಸೈಯ್ಯದ್ ಅನ್ಸಾರ್, ಪ್ರದೀಪ್, ನೀಡುಗರಹಳ್ಳಿ ಸಿದ್ದಪ್ಪ, ತನ್ವಿರ್, ಗುಲಾಬ್ ಸಲೀಮ್, ಮುಸವ್ವಿರ್, ಸಮಿವುಲ್ಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.