ADVERTISEMENT

ಹಾಸನ | ಕ್ರಾಫರ್ಡ್‌ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಶಾಸಕ ಸಿಮೆಂಟ್ ಮಂಜು ಸಿಡಿಮಿಡಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:53 IST
Last Updated 5 ನವೆಂಬರ್ 2025, 7:53 IST
ಸಕಲೇಶಪುರದಲ್ಲಿ ಮಂಗಳವಾರ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು
ಸಕಲೇಶಪುರದಲ್ಲಿ ಮಂಗಳವಾರ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು   

ಸಕಲೇಶಪುರ: ‘ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣದಿಂದ ಸ್ಕ್ಯಾನಿಂಗ್ ಯಂತ್ರವನ್ನು ತಂದು 10 ವರ್ಷಗಳಾಗಿದ್ದು, ಸರಿಯಾಗಿ 10 ಸ್ಕ್ಯಾನಿಂಗ್ ಮಾಡಿಲ್ಲ ಯಂತ್ರವೇ ಕೆಟ್ಟುಹೋಗಿದೆ ಎಂದರೆ ಯಾವ ರೀತಿ ಆಡಳಿತ ನಡೆಸುತ್ತಿದ್ದೀರಿ’ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಅವರನ್ನು ಪ್ರಶ್ನಿಸಿದರು.

ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ರೇಡಿಯಾಲಜಿ ತಜ್ಞರ ನೇಮಕ ಆದರೂ ಸಹ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ, ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವಂತೆ ಕಳಿಸುತ್ತಿದ್ದೀರಿ ಎಂಬ ದೂರುಗಳು ಬಂದಿವೆ’ ಎಂದರು.

ಶೀಘ್ರದಲ್ಲಿ ಯಂತ್ರ ದುರಸ್ತಿ ಮಾಡಿಸಿ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಸ್ಕ್ಯಾನಿಂಗ್ ವ್ಯವಸ್ಥೆ ಆಗಬೇಕು ಎಂದು ಶಾಸಕ ವೈದ್ಯಾಧಿಕಾರಿಗೆ ಸೂಚನೆ ನೀಡಿದರು. ಆಸ್ಪತ್ರೆಯ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಬೇಕು. ಆಸ್ಪತ್ರೆಯ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲ ಎಂಬ ದೂರುಗಳು ಇವೆ. ಕೂಡಲೇ ಎಲ್ಲಾ ಶೌಚಾಲಯಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.

ADVERTISEMENT

ಗ್ಸಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಅಂಬುಲೆನ್ಸ್ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.

ಕುಡಿಯುವ ನೀರು ಸರಬರಾಜು ವಿಷಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಬೇಡಿ ಎಂದು ಶಾಸಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶಿಥಿಲಾವಸ್ಥೆಯಲ್ಲಿ ಉಪಯೋಗಕ್ಕೆ ಇಲ್ಲದ ಶಾಲಾ ಕಟ್ಟಡಗಳನ್ನು ತೆರವುಗೊಳಿಸಿ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗೆ ಸೂಚಿಸಿದರು.

ಟ್ರೀ ಪಾರ್ಕ್‌ ನಿರ್ಮಾಣ ಮಾಡಲು ಪಟ್ಟಣದ ಸುತ್ತಮುತ್ತಲ 3 ಕಿ.ಮೀ. ವ್ಯಾಪ್ತಿಯಲ್ಲಿ 10 ಎಕರೆ, ವಸತಿ ಇಲ್ಲದವರಿಗೆ ವಸತಿ ನೀಡಲು ಕನಿಷ್ಠ 5 ಎಕರೆ ಸರ್ಕಾರಿ ಭೂಮಿ ಗೊತ್ತು ಮಾಡಿ ಎಂದು ತಹಶೀಲ್ದಾರ್ ಸುಪ್ರೀತಾ ಅವರಿಗೆ ಹೇಳಿದರು.

‘ಕೋವಿಡ್‌ ನಂತರ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತಿದ್ದ ಸುಮಾರು 25ಕ್ಕೂ ಹೆಚ್ಚು ಬಸ್ಸುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂಬ ದೂರುಗಳು ಬಂದಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಕೂಡಲೇ ನಿಲ್ಲಿಸಿರುವ ಎಲ್ಲಾ ಬಸ್ಸುಗಳ ಸಂಚಾರ ಪುನರ್ ಆರಂಭಿಸಬೇಕು’ ಎಂದರು.

ತಹಶೀಲ್ದಾರ್ ಕೆ.ಎಸ್‌. ಸುಪ್ರೀತಾ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಫೀರ್ ಅಹಮ್ಮದ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್, ತಾ.ಪಂ. ಸಹಾಯಕ ನಿರ್ದೇಶಕರಾದ ಕೆ.ಹರೀಶ್‌, ಎಚ್‌.ಎ. ಆದಿತ್ಯ, ಆರ್‌.ಎಫ್‌.ಓ ಎಚ್‌.ಆರ್. ಹೇಮಂತ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ. ರಾಜೇಗೌಡ, ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಎಚ್‌.ಎ. ಭಾಸ್ಕರ್, ಹೊಸೂರು ರವಿಚಂದ್ರ, ಕುಮಾರಯ್ಯ, ನುಸ್ರತ್ ಅಲಿ, ಲಕ್ಷ್ಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.