ADVERTISEMENT

ವೃದ್ಧ ದಂಪತಿ ಕೊಲೆ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:02 IST
Last Updated 5 ಸೆಪ್ಟೆಂಬರ್ 2020, 14:02 IST
ಚನ್ನರಾಯಪಟ್ಟಣ ತಾಲ್ಲೂಕು ಆಲಗೊಂಡಹಳ್ಳಿಯ ಒಂಟಿ ಮನೆಯಲ್ಲಿ ವೃದ್ಧ ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ
ಚನ್ನರಾಯಪಟ್ಟಣ ತಾಲ್ಲೂಕು ಆಲಗೊಂಡಹಳ್ಳಿಯ ಒಂಟಿ ಮನೆಯಲ್ಲಿ ವೃದ್ಧ ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ   

ಚನ್ನರಾಯಪಟ್ಟಣ: ತಾಲ್ಲೂಕಿನ ಆಲಗೊಂಡನಹಳ್ಳಿ ತೋಟದ ಮನೆಯ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಹಳೇಕೋಟೆ ಗ್ರಾಮದ ನಂದಕುಮಾರ, ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ ಯೋಗಾನಂದ, ಚನ್ನರಾಯಪಟ್ಟಣದ ಚೆನ್ನಿಗರಾಯ ಬಡಾವಣೆಯ ಭರತ್, ಬರಗೂರು ಕೊಪ್ಪಲು ಗ್ರಾಮದ ಮಧು ಎಂಬುವರನ್ನು ಬಂಧಿಸಲಾಗಿದೆ.

ಘಟನೆ ನಡೆದ ಎರಡೇ ದಿನದಲ್ಲಿ ಪ್ರಮುಖ ಆರೋಪಿ, ಬಾಗೂರು ಹೋಬಳಿ ರೇಚಿಹಳ್ಳಿಯ ಪ್ರಸಾದ್ ಅಲಿಯಾಸ್ ಗುಂಡ ಮತ್ತು ಬರಗೂರು ಕೊಪ್ಪಲು ಗ್ರಾಮದ ದ್ವಾರಕಿ ಅಲಿಯಾಸ್ ಮಂಜಶೆಟ್ಟಿಯನ್ನು ಬಂಧಿಸಲಾಗಿತ್ತು.

ADVERTISEMENT

ಮೃತರ ಮನೆಯಲ್ಲಿ ಕಳವು ಮಾಡಿದ್ದ ₹ 15.80 ಲಕ್ಷ ಮೌಲ್ಯದ 316 ಗ್ರಾಂ ಚಿನ್ನ, ₹ 1.25 ಲಕ್ಷ ಮೌಲ್ಯದ ಎರಡು ಕೆ.ಜಿ ಬೆಳ್ಳಿ, ₹ 20 ಸಾವಿರ ಮೌಲ್ಯದ 3 ಮೊಬೈಲ್‌ ಫೋನ್‌, ₹ 25 ಸಾವಿರ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಒಂದು ಕಾರು, ಮೂರು ಮೋಟಾರ್ ಬೈಕ್, ನಾಲ್ಕು ಮೊಬೈಲ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣದ ಪ್ರಮುಖ ಆರೋಪಿ ಪ್ರಸಾದ್, ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರಿನಿಂದ ತಾಲ್ಲೂಕಿಗೆ ಬಂದು ಅಣ್ಣೇನಹಳ್ಳಿ ಬಳಿ ಕೋಳಿ ಫಾರಂ ಗುತ್ತಿಗೆಗೆ ಪಡೆದಿದ್ದ. ಸಾಲ ಮಾಡಿದ್ದ ಆತನಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ ಸ್ಥಳೀಯವಾಗಿ ಯಾರು ಜಮೀನು ಮಾರುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದ.

ಮುರಳೀಧರ್ ಅವರ ಮನೆಯಲ್ಲಿ ಕಳ್ಳತನ ಮಾಡಲು ಇತರ ಐವರೊಂದಿಗೆ ಸೇರಿ ಸಂಚು ರೂಪಿಸಿದ್ದ. 4-5 ದಿನ ವೃದ್ಧ ದಂಪತಿ ಮನೆಯ ಬಳಿ ತೆರಳಿ ಚಲನವಲನ ತಿಳಿದುಕೊಂಡು ಆ.29ರಂದು ರಾತ್ರಿ ಮನೆಯ ಬಳಿ ತೆರಳಿದ್ದಾರೆ. ಕಳ್ಳರು ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾರೆ ಎಂದು ಮುರಳೀಧರ್ ಅವರನ್ನು ದ್ವಾರಕಿ ನಂಬಿಸಿದ್ದಾನೆ. ದ್ವಾರಕಿ ಪರಿಚಯ ಇದ್ದಿದ್ದರಿಂದ ಮುರಳೀಧರ್, ಉಮಾದೇವಿ ದಂಪತಿ ಬಾಗಿಲು ತೆರೆದಿದ್ದಾರೆ. ಆಗ ಆರು ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಇಬ್ಬರ ಬಾಯಿಗೆ ಟೇಪ್ ಸುತ್ತಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಗದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಮನೆಯಲ್ಲಿದ್ದ 10 ಎಟಿಎಂ ಕಾರ್ಡ್‌ ಮತ್ತು ಪಿನ್ ನಂಬರ್‌ ಪಡೆದಿದ್ದಾರೆ. ಅದರಲ್ಲಿ ಮೂರು ಕಾರ್ಡ್‌ಗಳನ್ನು ಉಪಯೋಗಿಸಿ ವಿವಿಧೆಡೆ ₹ 1.05 ಲಕ್ಷ ಹಣ ಪಡೆದು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.

ಆ.1 ರಂದು ಅಣ್ಣೇನಹಳ್ಳಿ ಬಳಿ ಇರುವ ಕೋಳಿ ಫಾರಂನಲ್ಲಿ ಆರೋಪಿ ಪ್ರಸಾದ್ ಇರುವುದನ್ನು ಖಚಿತಪಡಿಸಿಕೊಂಡ ಸಿಪಿಐಗಳಾದ ಸಿದ್ದರಾಮೇಶ್ವರ, ಬಿ.ಜಿ.ಕುಮಾರ್, ಡಿಸಿಬಿಯ ಪಿಎಸ್‌ಐ ವಿನಯ್ ಸ್ಥಳಕ್ಕೆ ತೆರಳಿ ಬಂಧಿಸಲು ಹೋದಾಗ ಪ್ರತಿರೋಧ ತೋರಿದ್ದಾನೆ. ಚಾಕುವಿನಿಂದ ವಿನಯ್ ಮೇಲೆ ಹಲ್ಲೆಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆಗ ಸಿಪಿಐ ಸಿದ್ದರಾಮೇಶ್ವರ, ಪಿಸ್ತೂಲಿನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್‌ಸ್ಪೆಕ್ಟರ್ ವಿನಯ್ ಗುಣಮುಖರಾಗಿದ್ದಾರೆ ಎಂದು ಹೇಳಿದರು.

ಈ ಕೃತ್ಯವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗೌರವಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.