ಹಿರೀಸಾವೆ (ಹಾಸನ): ‘ಹಿಂದುತ್ವದ ಭಾವ ಬೆಳೆಸದೇ ಇದ್ದರೆ ದೇಶ ಉಳಿಸಿಕೊಳ್ಳಲು ಆಗಲ್ಲ. ಹಿಂದೂಗಳು ದೇಶದಲ್ಲಿ ಶೇ 85 ರಷ್ಟಿದ್ದರೂ, ಮುಕ್ತವಾಗಿ ಗಣೇಶೋತ್ಸವ ಮಾಡುವುದು ಕಷ್ಟವಾಗುತ್ತಿದೆ. ನಾವೇನಾದರೂ ಶೇ 15ಕ್ಕೆ ಇಳಿದರೆ, ಹಿಂದೂಗಳ ನರಮೇಧ ನಡೆಯುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಗೆ ಮಂಗಳವಾರ ಭೇಟಿ ನೀಡಿದ್ದ ಅವರು, ಗಣೇಶೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
‘ಈಗ ಬ್ರಿಟಿಷರು ಇಲ್ಲ. ಆದರೆ, ಪರಕೀಯ ಆಕ್ರಮಣಕಾರರ ಮನಸ್ಥಿತಿ ಇನ್ನೂ ಇದೆ. ಹಲವು ರೀತಿಯಲ್ಲಿ ಅಕ್ರಮಣಕಾರರು ಇದ್ದೇ ಇದ್ದಾರೆ. ನಮ್ಮ ದೇಶಕ್ಕೆ ಸಾಂಸ್ಕೃತಿಕ, ಧಾರ್ಮಿಕ ಅಕ್ರಮಣಕಾರರಾಗಿ ಬಂದವರ ಪ್ರಭಾವ ಈಗಲೂ ಬೀರುತ್ತಿದ್ದಾರೆ. ಅವರಂತೆ ನಡೆಸುತ್ತಿದ್ದಾರೆ’ ಎಂದರು.
‘ಹಿಂದೂಗಳ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಕಾರಣ, 30, 40 ವರ್ಷ ಆದರೂ ಮದುವೆ ಇಲ್ಲ. ಶ್ರೀಮಂತರು ಮದುವೆಯಾಗಿ ಹತ್ತು ವರ್ಷ ಆದರೂ ಮಕ್ಕಳು ಮಾಡಿಕೊಂಡಿಲ್ಲ. ಗಂಡ-ಹೆಂಡತಿ ಸರ್ಕಾರಿ ನೌಕರಿಯಲ್ಲಿದ್ದರೆ, ಒಂದು ಮಗು ಮಾಡಿಕೊಂಡಿದ್ದಾರೆ. ಅವರಿಗೆ ಒಂದು ಮಗು ಸಾಕಾಗಬಹುದು. ಆದರೆ ದೇಶಕ್ಕೆ ಸಾಕಾಗಲ್ಲ. ಹಿಂದೂ ಜನಸಂಖ್ಯೆ ಕಡಿಮೆಯಾದರೆ ದೇಶ, ಸಂಸ್ಕೃತಿ, ನಮ್ಮ ದೇವಾಲಯಗಳು, ನಮ್ಮ ಊರ ದೇವತೆಯನ್ನು ಕಳೆದುಕೊಳ್ಳತ್ತೇವೆ. ಅದು ಕಳೆದುಕೊಳ್ಳಬಾರದು ಎಂದರೆ ಹಿಂದೂಗಳ ಸಂಖ್ಯೆ ಕುಸಿಯಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.