ADVERTISEMENT

ಪತ್ರಿಕಾ ವಿತರಕರ ದಿನಾಚರಣೆ: ನೋವು–ಸಂಭ್ರಮ ಹಂಚಿಕೊಂಡ ವಿತರಕರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 1:58 IST
Last Updated 4 ಸೆಪ್ಟೆಂಬರ್ 2025, 1:58 IST
ಎ.ವಿ. ಮಾಲತೇಶ್
ಎ.ವಿ. ಮಾಲತೇಶ್   

ಹಾಸನ: ಬೆಳಿಗ್ಗೆ ಎದ್ದೊಡನೆ ಪತ್ರಿಕೆ ಓದಲು ಕಾಯುತ್ತಿರುವ ಓದುಗರ ಮನೆ ಬಾಗಿಲಿಗೆ ನಿತ್ಯವೂ ಪತ್ರಿಕೆಗಳನ್ನು ವಿತರಿಸುವವರು ಪತ್ರಿಕಾ ವಿತರಕರು. ಮಳೆ, ಚಳಿ, ಗಾಳಿ ಎನ್ನದೇ ತಮ್ಮ ಕಾಯಕ ನಿಲ್ಲಿಸದೇ, ಓದುಗರ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣ, ವೆಬ್‌ಸೈಟ್‌ಗಳ ಹಾವಳಿ ನಡುವೆಯೂ ನಿತ್ಯ ನಸುಕಿನಲ್ಲಿ ಮನೆ-ಕಚೇರಿಗಳಿಗೆ ದೇಶ-ವಿದೇಶ, ರಾಜ್ಯ-ಸ್ಥಳೀಯ ಸುದ್ದಿಗಳನ್ನು ಒಳಗೊಂಡ ಪತ್ರಿಕೆಗಳನ್ನು ವಿತರಿಸುತ್ತಾರೆ.

ಸೆಪ್ಟೆಂಬರ್ 4 ಪತ್ರಿಕಾ ವಿತರಕರ ದಿನವಾಗಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ‘ಪ್ರಜಾವಾಣಿ’ ವಿತರಕರು ತಮ್ಮ ನೋವು–ನಲಿವು, ಸಂತಸಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

47 ವರ್ಷಗಳಿಂದ ನಿತ್ಯ ಕಾಯಕ

‘47 ವರ್ಷಗಳಿಂದ ದಿನಪತ್ರಿಕೆಗಳನ್ನು ವಿತರಿಸುತ್ತಿದ್ದೇನೆ. 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆರಂಭಿಸಿದ ಕಾಯಕವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ’ ಎಂದು ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀನಿವಾಸಪುರದ ವಿತರಕ ಎ.ವಿ. ಮಾಲತೇಶ್ ತಿಳಿಸಿದರು.

ಚನ್ನರಾಯಪಟ್ಟಣ, ಹೌಸಿಂಗ್ ಬೋರ್ಡ್ ಮತ್ತು ಶ್ರೀನಿವಾಸಪುರದಲ್ಲಿ ಪತ್ರಿಕೆಗಳನ್ನು ವಿತರಿಸಲಾಗುತ್ತಿದೆ. ನಿತ್ಯ ಮಳೆ, ಚಳಿ, ಗಾಳಿ ಎನ್ನದೇ ಪತ್ರಿಕೆಗಳನ್ನು ಹಂಚುವ ಮೂಲಕ ಗ್ರಾಹಕರಿಗೆ ತಾಜಾ ಸುದ್ದಿ ತಿಳಿಸಲಾಗುತ್ತಿದೆ ಎಂಬ ತೃಪ್ತಿ ಇದೆ.

25 ವರ್ಷಗಳ ಕಾಲ ಸೈಕಲ್‌ನಲ್ಲಿ  ಮನೆಗೆ ತೆರಳಿ ಪತ್ರಿಕೆ ವಿತರಿಸಲಾಗುತ್ತಿತ್ತು. ಕಾಲ ಬದಲಾದಂತೆ ಪತ್ರಿಕೆ ವಿತರಿಸಲು ಮೊಪೈಡ್ ಉಪಯೋಗಿಸಲಾಗುತ್ತಿದೆ. ಅನಾರೋಗ್ಯದ ನಿಮಿತ್ತ ಕೆಲ ತಿಂಗಳು ಕೆಲಸ ಸ್ಥಗಿತಗೊಳಿಸಿದ್ದೆ. ಆದರೆ ಗ್ರಾಹಕರ ಒತ್ತಾಸೆಯ ಮೇರೆಗೆ ಮತ್ತೆ ಕೆಲಸ ಶುರು ಮಾಡಿದ್ದೇನೆ. 

ವರ್ಷದಲ್ಲಿ ನಾಲ್ಕು ದಿನ ರಜೆ ಹೊರತುಪಡಿಸಿದರೆ, ವರ್ಷ ಪೂರ್ತಿ ಮುಂಜಾನೆ ಬೇಗ ಎದ್ದು ಕೆಲಸ ಮಾಡಬೇಕು. 1948ರಲ್ಲಿ ನಮ್ಮ  ಚಿಕ್ಕಪ್ಪ ಎ.ಎಸ್. ಸುಬ್ಬರಾವ್ ಏಜೆಂಟ್ ಆಗಿದ್ದರು. ಮತ್ತೊಬ್ಬ ಚಿಕ್ಕಪ್ಪ ಎ.ಎಸ್. ನಾಗರಾಜರಾವ್ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಇವರ ಜತೆಯಲ್ಲಿ ತಂದೆ ಎ.ಎಸ್. ವಿಶ್ವೇಶ್ವರಯ್ಯ ‘ಪ್ರಜಾವಾಣಿ’ ಏಜೆಂಟ್ ಆಗಿ ಕೆಲಸ ಮಾಡಿದರು. ಈಗಲೂ ನಮ್ಮ ಕುಟುಂಬದವರು ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಮಾಲತೇಶ್ ವಿವರಿಸಿದರು.

ಸೇವೆಯಿಂದ ಮನಸ್ಸಿಗೆ ನೆಮ್ಮದಿ

‘ನಿತ್ಯ ಮುಂಜಾನೆ 2.30ಕ್ಕೆ ವಾಹನದಿಂದ ದಿನಪತ್ರಿಕೆಗಳನ್ನು ಇಳಿಸಿಕೊಂಡು, ಅವುಗಳನ್ನು ವಿಭಾಗಿಸಿದ ಬಳಿಕ ಹಂಚಲು ಶುರು ಮಾಡಲಾಗುತ್ತದೆ. 30 ವರ್ಷದಿಂದ ಈ ಕಾಯಕ ಮಾಡಲಾಗುತ್ತಿದ್ದೇನೆ’ ಎಂದು ಚನ್ನರಾಯಪಟ್ಟಣದ ವಿತರಕ ಸಿ.ಎಸ್‌.ವೆಂಕಟೇಶ್ ತಮ್ಮ ಅನುಭವ ಹಂಚಿಕೊಂಡರು. 

20 ವರ್ಷ ಸೈಕಲ್‍ನಲ್ಲಿ ತೆರಳಿ ಪತ್ರಿಕೆ ಹಂಚಲಾಗುತ್ತಿತ್ತು. ಸದ್ಯ ಬೈಕ್‍ನಲ್ಲಿ ವಿತರಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಹಕರು ಮುಂಜಾನೆ ಪತ್ರಿಕೆಗಳಿಗಾಗಿ ಕಾಯುತ್ತಿರುತ್ತಾರೆ. ಅವರಿಗೆ ನಿಗದಿತ ಸಮಯಕ್ಕೆ ಪತ್ರಿಕೆ ವಿತರಿಸಲಾಗುತ್ತದೆ. ಕೆಲ ಸಂದರ್ಭದಲ್ಲಿ  ತಾಂತ್ರಿಕ ಕಾರಣದಿಂದ ಸ್ವಲ್ಪ ಹೊತ್ತು ತಡವಾದರೂ ಗ್ರಾಹಕರು ಪೋನ್ ಮಾಡುತ್ತಾರೆ. 

ಬರುವ ಆದಾಯಕ್ಕಿಂತ ಗ್ರಾಹಕರಿಗೆ ಸಲ್ಲಿಸುವ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಪತ್ರಿಕೆಗಳನ್ನು ವಿತರಿಸುವುದು ನಿತ್ಯದ ಕಡ್ಡಾಯ ಕೆಲಸ. ಯಾವುದೇ ಊರಿಗೆ ಹೋದರೂ ಅದೇ ದಿನ  ರಾತ್ರಿ ವಾಪಸ್ ಮನೆಗೆ ಬಂದು, ಎಂದಿನಂತೆ ಬೆಳಿಗ್ಗೆ ಪತ್ರಿಕೆ ಹಂಚುವ ಕೆಲಸ ಮಾಡಬೇಕಿದೆ. 

ವರ್ಷದಲ್ಲಿ 360 ದಿನ ಕೆಲಸ ಮಾಡಲಾಗುತ್ತದೆ. ಪತ್ರಿಕೆಗಳಿಗೆ ನಾಲ್ಕು ದಿನ ರಜೆ ಇದ್ದಾಗ ನಮಗೂ ರಜೆ ಇರುತ್ತದೆ. ಪತ್ರಿಕಾ ವಿತರಕರ ಸಂಘ ಅಸ್ತಿತ್ವಕ್ಕೆ ತರಲಾಗಿದ್ದು, ವಿತರಕರ ನೆರವಿಗೆ ರಾಜ್ಯ ಸರ್ಕಾರ ಧಾವಿಸುವ ದೃಷ್ಟಿಯಿಂದ ಕ್ಷೇಮನಿಧಿ ಸ್ಥಾಪಿಸಬೇಕು ಮತ್ತು ವಿಮೆ ಮಾಡಿಸಬೇಕು ಎಂಬ ಮನವಿ ವಿತರಕರದ್ದು.

ಸಿ.ಎಸ್. ವೆಂಕಟೇಶ್, ಚನ್ನರಾಯಪಟ್ಟಣ

ಸಿ.ಎಸ್. ವೆಂಕಟೇಶ್
ವಸಂತ್ ಕುಮಾರ್

‘ಇ–ಪೇಪರ್‌ ಓದುವವರೇ ಹೆಚ್ಚು’

69 ವರ್ಷದ ನಾನು 41 ವರ್ಷಗಳಿಂದ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ‘ಪ್ರಜಾವಾಣಿ’ ಪತ್ರಿಕೆ ವಿತರಕನಾಗಿದ್ದೇನೆ. ಮಲೆನಾಡಿನ ನಮ್ಮ ಈ ಊರು ಹಾಗೂ ಅಕ್ಕಪಕ್ಕದ ಹೊಂಕರವಳ್ಳಿ ಜಮ್ನಹಳ್ಳಿ ಸುತ್ತಲಿನ ಪ್ರದೇಶಗಳಿಗೆ ಹೋಗಿ ಪತ್ರಿಕೆ ಹಂಚುವುದು ನಿಜಕ್ಕೂ ದೊಡ್ಡ ಸಾಹಸ. ದೂರ ದೂರದಲ್ಲಿ ಮನೆಗಳು ಕಾಡಾನೆ ಸಮಸ್ಯೆ ಇವುಗಳ ನಡುವೆ ಹೇಗೋ ಇಷ್ಟು ವರ್ಷ ಪತ್ರಿಕ ವಿತರಣೆ ಮಾಡಿಕೊಂಡು ಬರುತ್ತಿದ್ದೇವೆ. ಈಗಂತೂ ಓದುಗರು ನಾವೆಲ್ಲ ಆನ್‌ಲೈನ್‌ ಇ–ಪೇಪರ್‌ನಲ್ಲಿಯೇ ‘ಪ್ರಜಾವಾಣಿ’ ಓದುತ್ತಿದ್ದೇವೆ. ಪತ್ರಿಕೆ ಬೇಡ ಎನ್ನುತ್ತಾರೆ. ಪತ್ರಿಕೆ ಹಂಚಿದ ಮೇಲೆ ತಿಂಗಳಿಗೊಮ್ಮೆ ಮನೆ ಬಾಗಿಲಿಗೆ 3–4 ಬಾರಿ ಹೋಗಿ ಹಣ ಸಂಗ್ರಹ ಮಾಡಬೇಕು. ಸಮಸ್ಯೆ ಸಾಕಷ್ಟಿದೆ. ವಸಂತ್ ಕುಮಾರ್ ಬಾಳ್ಳುಪೇಟೆ ಸಕಲೇಶಪುರ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.