ADVERTISEMENT

ಸಂಪ್ರದಾಯದಂತೆ ದಸರಾ ಉದ್ಘಾಟನೆ ಆಗಲಿ: ನಾರಾಯಣ ಗೌಡ

ರಾಜಕಾರಣಿಗಳ ನಿಲುವು ದೇಶದ ನಿಲುವಲ್ಲ: ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 1:45 IST
Last Updated 3 ಸೆಪ್ಟೆಂಬರ್ 2025, 1:45 IST
   

ಹಾಸನ: ‘ಇಲ್ಲಿಯ ವರೆಗೂ ಯಾವ ಸಂಪ್ರದಾಯದಂತೆ ನಡೆದಿದಿಯೋ ಅದೇ ರೀತಿ ದಸರಾ ಉದ್ಘಾಟನೆ ಆಗಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾಹಿತಿ ಬಾನು ಮುಷ್ತಾಕ್ ಅವರು ರಾಜಕೀಯ ಒತ್ತಡ, ಸ್ವಂತ ಆಲೋಚನೆಗಳ ಆಧಾರದ ಮೇಲೆ ದಸರಾ ಉದ್ಘಾಟನೆ ಮಾಡುವುದು ಸರಿಯಲ್ಲ’ ಎಂದರು.

‘ಕನ್ನಡದ ಭುವನೇಶ್ವರಿ ಬಗ್ಗೆ ಲಘುವಾಗಿ ಮಾತನಾಡುವುದು ಕನ್ನಡಿಗರಿಗೆ ಅವಮಾನ. ಭುವನೇಶ್ವರಿ ಕರ್ನಾಟಕದ ಎಲ್ಲ ಧರ್ಮೀಯರು ಆರಾಧಿಸುವ ದೇವಿ. ಅದು ಈಗ ಹುಟ್ಟಿದ ಪರಂಪರೆ ಅಲ್ಲ. ಇಂತಹ ಮಾತುಗಳು ನಾಳೆ ಚಾಮುಂಡೇಶ್ವರಿ ಕುರಿತು ಹೇಳಿಕೆಗೆ ದಾರಿ ಮಾಡಿಕೊಡುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ’ ಎಂದರು.

ADVERTISEMENT

‘ಭುವನೇಶ್ವರಿ, ಚಾಮುಂಡಿಯನ್ನು ಒಪ್ಪದೇ ಇದ್ದರೆ, ಮೈಸೂರಿನ ಮಹಾರಾಜರ ದಸರಾ ಹೇಗೆ ಉದ್ಘಾಟಿಸುತ್ತೀರಿ?. ನೀವು ದಸರಾ ಉದ್ಘಾಟನೆ ಮಾಡುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಕನ್ನಡಿಗರ ಭಾವನೆಗೆ ಧಕ್ಕೆ ತರುವ ಹೇಳಿಕೆ ನಿಲ್ಲಿಸಬೇಕು. ಅಂತಹ ಹೇಳಿಕೆಗಳ ನಡುವೆಯೂ ಉದ್ಘಾಟನೆ ಮಾಡಿದರೆ ಅದು ತಪ್ಪಲ್ಲವೇ’ ಎಂದರು.

‘ಶಿವಕುಮಾರ್‌ ದೇವಸ್ಥಾನಗಳಿಗೆ ಹೋಗಬಾರದು’

ಬಸವಾದಿ ಶರಣರ ತತ್ವಗಳನ್ನು ಪಾಲಿಸುತ್ತಿದ್ದರೆ ಡಿ.ಕೆ. ಶಿವಕುಮಾರ್ ಇನ್ನು ಮುಂದೆ ದೇವಸ್ಥಾನಗಳಿಗೆ ಹೋಗಬಾರದು. ತಮ್ಮ ಧಾರ್ಮಿಕ ಚಿಂತನೆಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು ಎಂದು ಟಿ.ಎ. ನಾರಾಯಣಗೌಡ ಹೇಳಿದರು.

‘ರಾಜಕಾರಣಿಗಳ ನಿಲುವು, ದೇಶದ, ಭಾಷೆ ಹಾಗೂ ಧರ್ಮದ ನಿಲುವಲ್ಲ, ಅದು ಕೇವಲ ತೆವಲು. ನಿತ್ಯ ದೇವಸ್ಥಾನ, ಹೋಮ ಮಾಡುವುದು ಹಿಂದೂ ಸಂಪ್ರದಾಯವಲ್ಲ ಎನ್ನುವುದು ವೈರಾಗ್ಯವಲ್ಲ, ರಾಜಕೀಯ’ ಎಂದರು.

‘ಧಾರ್ಮಿಕ ದೇವಸ್ಥಾನಗಳ ವಿಚಾರದಲ್ಲಿ ಕರವೇ ಮಾತನಾಡಬಾರದು ಎನ್ನುವುದು ತೀರ್ಮಾನ. ಬಿಜೆಪಿಯವರು ಏನಾದರೂ ಕೈಗೆತ್ತಿಕೊಂಡಾಗ, ಕಾಂಗ್ರೆಸ್‌ನವರು ವಿರೋಧ ಮಾಡುತ್ತಾರೆ. ಕಾಂಗ್ರೆಸ್‌ನವರು ಬೆಂಬಲಿಸುತ್ತಾರೆ ಎನ್ನುವ ಕಾರಣಕ್ಕೆ ಬಿಜೆಪಿಯವರು ಅದನ್ನು ವಿರೋಧ ಮಾಡುತ್ತಾರೆ’ ಎಂದು ಹೇಳಿದರು.

‘ಬಾನು ಮುಷ್ತಾಕ್ ಹಿಂದೆ ಸರಿಯಲಿ’

ಹಾಸನ: ‘ನಾಡಹಬ್ಬ ದಸರಾ ಉದ್ಘಾಟನೆ ಗೊಂದಲ ದಿನೇ ದಿನೇ ನಾನಾ ತಿರುವ ಪಡೆಯುತ್ತಿರುವ ಸಂದರ್ಭದಲ್ಲಿ ಬಾನು ಮುಷ್ತಾಕ್ ಅವರು ಸ್ವಯಂಪ್ರೇರಿತರಾಗಿ ಹಿಂದೆ ಸರಿಯುವುದೇ ಸೂಕ್ತ’ ಎಂದು ರಾಷ್ಟ್ರ ರಕ್ಷಣಾ ಸೇನೆ ರಾಜ್ಯ ಸಂಚಾಲಕ ಸುರೇಶ್ ಗೌಡ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಸರಾ ಉದ್ಘಾಟನಾ ಗೊಂದಲ ಮುಜುಗರಕ್ಕೆ ಈಡುಮಾಡುವ ಕಾರಣ, ಕನ್ನಡತಿ ಬಾನು ಅವರು ತ್ಯಾಗ ಮನೋಭಾವದೊಂದಿಗೆ ಉದ್ಘಾಟನಾ ಕಾರ್ಯಕ್ರಮದಿಂದ ಹಿಂದೆ ಸರಿಯುವುದೇ ಸೂಕ್ತ’ ಎಂದರು.

‘ಹಿಂದುತ್ವವಾದಿಗಳು ನಿಮ್ಮ ಆಯ್ಕೆ ತಿರಸ್ಕರಿಸಿದ್ದು, ಕೆಲವರು ಪುರಸ್ಕರಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ, ಈ ಹಿಂದೆ ಮುಷ್ತಾಕ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೊ ಆಧಾರವಾಗಿ ಇಟ್ಟುಕೊಂಡು ತಾಯಿ ಚಾಮುಂಡೇಶ್ವರಿ ಪೂಜೆ ಹಾಗೂ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆ ಸರಿ ಅಲ್ಲ ಎಂದು ಪ್ರತಿಪಾದಿಸಿದ್ದಾರೆ. ದಿನೇ ದಿನೇ ಈ ಕುರಿತಾದ ಚರ್ಚೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಾನು ಅವರು ಸೂಕ್ತ ತೀರ್ಮಾನ ಕೈಗೊಳ್ಳುವುದು ಅಗತ್ಯ’ ಎಂದರು.

‘ಬಾನು ಮುಷ್ತಾಕ್‌ ಅವರ ಅರ್ಹತೆಗೆ ತಕ್ಕಂತೆ ಕನ್ನಡ ಸಾಹಿತ್ಯ ಸಮ್ಮೇಳನ ಅಥವಾ ಇತರೆ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ ಕಾಣಬಹುದಾಗಿದೆ. ಈ ಸಂಬಂಧ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು. ಜಿಲ್ಲಾ ಸಂಚಾಲಕ ರಾಜೇಶ್, ಕೆಂಚನಹಳ್ಳಿ , ಧರ್ಮನಾಯಕ, ಪವನ್ ಇದ್ದರು.

‘ಬಿಜೆಪಿಯಿಂದ ಅನಗತ್ಯ ಗೊಂದಲ’

ಹಾಸನ: ‘ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರದಲ್ಲಿ ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೇವರಾಜೇಗೌಡ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವುದು ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೋ, ವಕೀಲರೆಂಬ ಕಾರಣಕ್ಕೋ ಎಂಬುದನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

‘ಕನ್ನಡದ ಕೃತಿಗೆ ಬುಕರ್ ಪ್ರಶಸ್ತಿ ಒಲಿದಿದೆ. ಕನ್ನಡ ಭಾಷೆ ಅಂತರ ರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಬಾನು ಮುಷ್ತಾಕ್ ಅವರ ಪಾತ್ರ ಹೆಚ್ಚಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಅವರನ್ನು ಉದ್ಘಾಟಕರಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು ಸಮಂಜಸವಾಗಿದೆ. ಹೀಗಿರುವಾಗ ಬಿಜೆಪಿ ನಾಯಕರು ಧರ್ಮದ ಹೆಸರಿನಲ್ಲಿ ರಾಜ್ಯದಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಇತ್ತೀಚೆಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ದರ್ಗಾ ಉದ್ಘಾಟನೆ ಮಾಡಿದರು. ಅಂದು ಮಾತನಾಡದ ಬಿಜೆಪಿಯವರು, ಮುಸ್ಲಿಂ ಮಹಿಳೆ ಉದ್ಘಾಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ವಿರೋಧಿಸುತ್ತಿರುವುದು ಖಂಡನೀಯ’ ಎಂದರು. ಮಹಮ್ಮದ್ ಗೌಸ್, ಶಿವಕುಮಾರ್, ಚಂದ್ರಶೇಖರ್, ಶಂಭುಗೌಡ, ಕುಮಾರ್ ಶೆಟ್ಟಿ ಇದ್ದರು.

ಬಾನು ಮುಷ್ತಾಕ್‌ಗೆ ಇಂದು ಆಹ್ವಾನ ಮೈಸೂರು: ‘ಈ ವರ್ಷದ ಮೈಸೂರು ದಸರಾ ಉದ್ಘಾಟಕರಾದ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಸೆ.3ರಂದು ಜಿಲ್ಲಾಡಳಿತದಿಂದ ಆಹ್ವಾನಿಸಲಾಗುವುದು’ ಎಂದು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

‘ಹಾಸನದಲ್ಲಿರುವ ಅವರ ನಿವಾಸದಲ್ಲಿ ಸಂಜೆ 4ಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನ ನೀಡಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.