ADVERTISEMENT

ಕಾಂಗ್ರೆಸ್‌ ಸೋಲಿಗೆ ಜಿಲ್ಲಾಧ್ಯಕ್ಷರೇ ಹೊಣೆ; ಆರೋಪ

ರಾಜೀನಾಮೆಗೆ ಮುಖಂಡ ದೇವರಾಜೇಗೌಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 14:05 IST
Last Updated 8 ಸೆಪ್ಟೆಂಬರ್ 2018, 14:05 IST

ಹಾಸನ: ‘ಹಾಸನ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್ ಹಾಗೂ ಮುಖಂಡ ಎಚ್.ಕೆ.ಮಹೇಶ್ ಅವರೇ ನೇರ ಹೊಣೆ’ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆರೋಪಿಸಿದರು.

‘ನಗರಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯಲ್ಲಿ ಜಾವಗಲ್ ಮಂಜುನಾಥ್ ಹಾಗೂ ಎಚ್.ಕೆ ಮಹೇಶ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದರಿಂದಲೇ ನಿಷ್ಠಾವಂತರಿಗೆ, ಸಮರ್ಥರಿಗೆ ಟಿಕೆಟ್ ಕೈತಪ್ಪಿ ಪಕ್ಷ ಹಿನ್ನೆಡೆ ಅನುಭವಿಸುವಂತಾಗಿದೆ. ಹಾಗಾಗಿ ಕೂಡಲೇ ಸೋಲಿನ ಹೊಣೆ ಹೊತ್ತು ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈ ಹಿಂದೆ ಪಕ್ಷದಿಂದ ಉಚ್ಚಾಟನೆಯಾದವರ ಸಂಬಂಧಿಗಳಿಗೆ ಟಿಕೆಟ್ ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಎಚ್.ಕೆ.ಮಹೇಶ್ ಜೆಡಿಎಸ್ ಜತೆಗೆ ಒಳಒಪ್ಪಂದ ಮಾಡಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮುಂದಿನ ವರ್ಷ ಲೋಕಸಭೆ ಚುನಾವಣೆ ಬರಲಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೊಳ್ಳಬೇಕಿದ್ದು, ಸಮರ್ಥ ಜಿಲ್ಲಾಧ್ಯಕ್ಷರನ್ನು ನೇಮಿಸುವ ಅಗತ್ಯವಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ನಾಯಕರು ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಮಾಜಿ ಸದಸ್ಯ ಸಿ.ಟಿ. ಕುಮಾರ್ ಮಾತನಾಡಿ, ‘ಎಚ್.ಕೆ ಮಹೇಶ್ ಅವರು ಹುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹಾಗಾಗಿಯೇ ಜೆಡಿಎಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡು ರೇವಣ್ಣರಿಗೆ ರಾಜಕೀಯವಾಗಿ ನೆರವಾಗಿದ್ದಾರೆ. ಅವರ ಈ ನಡೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿಯುತ್ತಿದ್ದು, ಶೀಘ್ರವೇ ರಾಜ್ಯ ನಾಯಕರ ಬಳಿಗೆ ಜಿಲ್ಲೆಯಿಂದ ಸಮಾನ ಮನಸ್ಕರ ನಿಯೋಗ ತೆರಳಿ ಕ್ರಮಕ್ಕೆ ಒತ್ತಾಯಿಸಲಾಗುವುದು’ ಎಂದರು.

ನಗರಸಭೆ ಮಾಜಿ ಸದಸ್ಯ ಎಂ.ಕೆ.ರಾಜೇಶ್(ಬಾಬಿ), ಸಿ.ಟಿ.ಕುಮಾರ್, ನೀಲಕಂಠ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪರ್ವಿಜ್‌ ಪಾಷಾ, ಮುಖಂಡ ಮಲ್ಲಿಗೆವಾಳು ದೇವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.