ಹಾಸನ: ಹಾಸನಾಂಬೆ ದೇವಿ ದರ್ಶನೋತ್ಸವ ವೇಳೆ ಪೊಲೀಸರು ಮತ್ತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಧ್ಯೆ ಮಂಗಳವಾರ ರಾತ್ರಿ ವಾಗ್ವಾದ ನಡೆದಿದ್ದು, ಕೈಕೈ ಮಿಲಾಯಿಸಿದ್ದಾರೆ. ಅದರಿಂದ ಸಿಟ್ಟಾದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಮಳವಳ್ಳಿ ಸಿಪಿಐ ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಶಿಷ್ಟಾಚಾರದ ವಾಹನ ತಡೆದಿದ್ದಕ್ಕೆ ಜಿಲ್ಲಾಧಿಕಾರಿ ಆಪ್ತ ಸಹಾಯಯಕ ಶಶಿ ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆ ವೇಳೆ ಪೊಲೀಸರು, ಶಶಿ ಅವರನ್ನು ಹೊರಕ್ಕೆ ತಳ್ಳಿದ್ದರು.
ವಿಷಯದ ತಿಳಿದು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ನಂತರ ಬಂದ ಜಿಲ್ಲಾಧಿಕಾರಿ, ‘ಇಂಥ ವರ್ತನೆ ಸರಿಯಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೇಳಿ ಅಮಾನತು ಮಾಡಿಸುತ್ತೇನೆ’ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಅದೇ ಕಾರಣಕ್ಕೆ, ಮಳವಳ್ಳಿ ಸಿಪಿಐ ರವಿ ಮತ್ತು ಜಿಲ್ಲಾಧಿಕಾರಿ ನಡುವೆ ವಾಗ್ವಾದ ನಡೆಯಿತು.
‘ನಮ್ಮ ಮಹಿಳಾ ಪಿಎಸ್‌ಐಗೆ ಗಾಯವಾಗಿದೆ. ಕೂಡಲೇ ಚಿಕಿತ್ಸೆ ಕೊಡಿಸಿ. ನಿಮ್ಮ ಪಿಎ ವರ್ತನೆಯೇ ಘಟನೆಗೆ ಕಾರಣ’ ಎಂದು ರವಿ ದೂರಿದರು. ಅದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
‘ಗೇಟ್ ಮುಂದೆ ಪೊಲೀಸರ ಬದಲು, ಕಂದಾಯ ಅಧಿಕಾರಿಗಳು ನಿಂತು ಕೆಲಸ ನಿರ್ವಹಿಸಿ’ ಆದೇಶಿಸಿದ ಸಿ.ಸತ್ಯಭಾಮಾ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿ ನಿರ್ಗಮಿಸಿದರು. ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ, ಪರಿಶೀಲಿಸಿದರು.
ಶಾಸಕ ಸುರೇಶ್–ಡಿಸಿ ಮಧ್ಯೆ ವಾಗ್ವಾದ: ಬಿ.ಎಸ್. ಯಡಿಯೂರಪ್ಪ ಭೇಟಿ ವೇಳೆ, ಬೇಲೂರು ಶಾಸಕ ಎಚ್.ಕೆ. ಸುರೇಶ್ ಹಾಗೂ ಜಿಲ್ಲಾಧಿಕಾರಿ ಮಧ್ಯೆಯೂ ವಾಗ್ವಾದ ನಡೆಯಿತು. ಗರ್ಭಗುಡಿಗೆ ಪ್ರವೇಶಿಸುವುದನ್ನು ತಡೆದ ಜಿಲ್ಲಾಧಿಕಾರಿ ನಡೆಗೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.