ADVERTISEMENT

‘ಕೆರೆಯ ಅಭಿವೃದ್ಧಿಯಿಂದ ಅಂತರ್ಜಲ ವೃದ್ಧಿ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:31 IST
Last Updated 7 ಫೆಬ್ರುವರಿ 2025, 16:31 IST
ಗಂಡಸಿ ಹೋಬಳಿ ಜಿ. ಹೊನ್ನೇನಹಳ್ಳಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಗಂಡಸಿ ಸಬ್‌ ಇನ್‌ಸ್ಪೆಕ್ಟರ್‌ ಆರತಿ ಉದ್ಘಾಟಿಸಿದರು
ಗಂಡಸಿ ಹೋಬಳಿ ಜಿ. ಹೊನ್ನೇನಹಳ್ಳಿ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಗಂಡಸಿ ಸಬ್‌ ಇನ್‌ಸ್ಪೆಕ್ಟರ್‌ ಆರತಿ ಉದ್ಘಾಟಿಸಿದರು   

ಗಂಡಸಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಗ್ರಾಮಾಂತರ ಪ್ರದೇಶದ ಕೆರೆಕಟ್ಟೆಗಳಲ್ಲಿ ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸುತ್ತಿರುವುದರಿಂದ ಅಂತರ್ಜಲಮಟ್ಟ ವೃದ್ಧಿಯಾಗಿ ರೈತರ ತೋಟ, ಜಮೀನುಗಳಿಗೆ ಅನುಕೂಲವಾಗುತ್ತಿದೆ. ಜನೋಪಯೋಗಿ ಯೋಜನೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಗಂಡಸಿ ಸಬ್‌ ಇನ್‌ಸ್ಪೆಕ್ಟರ್‌ ಆರತಿ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಪಡಿಸಿದ ಜಿ. ಹೊನ್ನೇನಹಳ್ಳಿಯ ಕೆರೆಯ ಹಸ್ತಾಂತರ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಪ್ರತಿನಿಧಿಗಳು ಮಾಡಬೇಕಾದ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಬಡ ಕುಟುಂಬಗಳಿಗೆ ಮನೆ, ಮಾಸಾಶನ, ಮಹಿಳೆಯರ ಸಬಲೀಕರಣ ಯೋಜನೆ ಕಲ್ಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ಮಾತನಾಡಿ, ₹7 ಲಕ್ಷ ವೆಚ್ಚದಲ್ಲಿ ಜಿ.ಹೊನ್ನೇನಹಳ್ಳಿ ಕೆರೆ ಅಭಿವೃದ್ಧಿ ಪಡಿಸಿದ್ದು, ತ್ಯಾಜ್ಯ ವಸ್ತುಗಳನ್ನು ಕೆರೆಗೆ ಹಾಕಿ ಕಲುಷಿತಗೊಳಿಸಬೇಡಿ. ಕೆರೆಯ ಸುತ್ತ ವಿವಿಧ ಜಾತಿಯ ಸಸಿ ನೆಟ್ಟಿದ್ದು, ಕಾಪಾಡುವ ಜವಾಬ್ದಾರಿ ಕೆರೆ ಅಭಿವೃದ್ಧಿ ಸಮಿತಿ, ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿಯದ್ದು. ನಮ್ಮ ಜೊತೆ ಕೈಜೋಡಿಸಿದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜು, ತಾಲ್ಲೂಕು ಯೋಜನಾಧಿಕಾರಿ ಅಕ್ಷತಾ ರೈ, ಹೆಗ್ಗಟ್ಟ ಗ್ರಾ.ಪಂ. ಅಧ್ಯಕ್ಷ ಮಂಜಪ್ಪ, ಸದಸ್ಯರಾದ ಹರೀಶ್, ರುದ್ರೇಶ್ ಕೃಷಿ ವಿಭಾಗದ ಮೇಲ್ವಿಚಾರಕ ಗುರುಮೂರ್ತಿ, ಗಂಡಸಿ ವಲಯದ ಮೇಲ್ವಿಚಾರಕ ಸೀತಾರಾಮ್, ಸೇವಾ ಪ್ರತಿನಿಧಿಗಳಾದ ಚೈತ್ರಾ, ಪೂರ್ಣಿಮಾ, ಆಶಾ, ನಾಗರತ್ನಾ, ಶ್ರುತಿ, ಕವಿತಾ, ಶಶಿಕಲಾ, ದಿಲ್ ಷಾದ್ ಬೇಗಂ ಮತ್ತು ಗ್ರಾಮಸ್ಥರು, ಸಂಘದ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.