ಹಾಸನ: ಹಾಸನಾಂಬ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶುಕ್ರವಾರ ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರು.
ದರ್ಶನ ಆರಂಭವಾಗಿ ವಾರ ಕಳೆದಿದ್ದು, ಈಗಾಗಲೇ 15 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶುಕ್ರವಾರ ಒಂದೇ ದಿನ 4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ದರು.
₹1 ಸಾವಿರದ ಟಿಕೆಟ್ ಸಾಲು 2 ಕಿ.ಮೀ. ಇದ್ದರೆ, ₹ 300 ಟಿಕೆಟ್ ಸಾಲು 3 ಕಿ.ಮೀ. ದೂರದವರೆಗೂ ಇತ್ತು. ಟಿಕೆಟ್ ಪಡೆದವರು 3–4 ಗಂಟೆ ಕಾಯಬೇಕಿದ್ದು, ಸಾಮಾನ್ಯ ದರ್ಶನಕ್ಕಾಗಿ 6 ಗಂಟೆ ಕಾಯಬೇಕಿತ್ತು. ಟಿಕೆಟ್ ಖರೀದಿಗೂ ಮುಕ್ಕಾಲು ಗಂಟೆ ಸಾಲಿನಲ್ಲಿ ನಿಲ್ಲುವಂತಾಗಿತ್ತು.
ದಿಕ್ಕು ತೋಚದ ಆಡಳಿತ: ಭಕ್ತರು ಹೆಚ್ಚುತ್ತಿರುವುದರಿಂದ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎನ್ನುವುದು ಆಡಳಿತಕ್ಕೆ ತಲೆನೋವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ನಗರದಲ್ಲಿಯೇ ವಾಸ್ತವ್ಯ ಹೂಡಿ, ಅಧಿಕಾರಿಗಳ ಜೊತೆಗೆ ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.
‘ಶುಕ್ರವಾರ 3 ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದು, ದರ್ಶನಕ್ಕೆ ಕನಿಷ್ಠ 4 ಗಂಟೆ ತಗುಲುತ್ತಿದೆ. ಭಕ್ತರು ಇದನ್ನು ಅರಿತು ಯೋಜನೆ ರೂಪಿಸಬೇಕು’ ಎಂದು ಸಚಿವರು ಮನವಿ ಮಾಡಿದ್ದಾರೆ.
‘ಶಾಸ್ತ್ರದ ಪ್ರಕಾರ ಶನಿವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಬೇಕು. ಅದಕ್ಕಾಗಿ ಶನಿವಾರ ರಾತ್ರಿ 10 ಗಂಟೆಗೆ ದ್ವಾರ ಮುಚ್ಚಲಿದ್ದು, ಮಧ್ಯರಾತ್ರಿ 12 ಗಂಟೆಗೆ ದರ್ಶನ ಸ್ಥಗಿತಗೊಳ್ಳಲಿದೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಮತ್ತೆ ಆರಂಭವಾಗಲಿದೆ. ಶನಿವಾರ ರಾತ್ರಿ ಬರುವುದನ್ನು ತಪ್ಪಿಸಿ. ಪ್ರತಿಯೊಬ್ಬರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಅಗತ್ಯ ಸಹಕಾರ ನೀಡಬೇಕು’ ಎಂದು ತಿಳಿಸಿದ್ದಾರೆ.
ಹಾಸನಾಂಬೆ ಭಕ್ತರು ಹೆಚ್ಚಾಗುತ್ತಿದ್ದಾರೆ. ದರ್ಶನಕ್ಕೆ ಹೆಚ್ಚು ಹೊತ್ತು ಕಾಯಬೇಕಾಗುವುದರಿಂದ ಶಾಂತಚಿತ್ತರಾಗಿ ಸಜ್ಜಾಗಿ ಬನ್ನಿಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ ಹಾಸನ
ಈಗ ಹೆಚ್ಚುವರಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸರದಿಯನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಆದರೆ ಗರ್ಭಗುಡಿಯ ಬಳಿ ಮಹಿಳೆಯರೂ ವೃದ್ಧರು ಎನ್ನದೇ ಸಿಬ್ಬಂದಿ ಎಳೆದಾಡುತ್ತಾರೆ.ರಾಧಿಕಾ ಶೆಣೈ, ತುಮಕೂರಿನ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.