ADVERTISEMENT

ಕೋವಿಡ್‌ ಲಸಿಕೆಯ ಪ್ರಗತಿ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:36 IST
Last Updated 14 ಜನವರಿ 2022, 5:36 IST
ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಅಧಿಕಾರಿಗಳ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿಎಚ್‌ಒ ಕೆ.ಎಂ.ಸತೀಶ್‌ಕುಮಾರ್‌, ಕಾಂತರಾಜ್‌ ಇದ್ದಾರೆ
ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಅಧಿಕಾರಿಗಳ ಸಭೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಡಿಎಚ್‌ಒ ಕೆ.ಎಂ.ಸತೀಶ್‌ಕುಮಾರ್‌, ಕಾಂತರಾಜ್‌ ಇದ್ದಾರೆ   

ಹಾಸನ: ನಾಲ್ಕು ದಿನದೊಳಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ 15–18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿ, ಈವರೆಗಿನ ಪ್ರಗತಿ ಬಗ್ಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ 3ನೇ ಅಲೆ ನಿಯಂತ್ರಣ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಹಾಗೂ ಕೋವಿಡ್ ಲಸಿಕಾ ಕಾರ್ಯ ಕ್ರಮದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ‘ತ್ವರಿತವಾಗಿ 15 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿ ಗುರಿ ಸಾಧಿಸಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 15–18 ವರ್ಷ ದೊಳಗಿನ 2,128 ಮಕ್ಕಳು ಶಾಲೆ ಬಿಟ್ಟಿದ್ದಾರೆ. ಅಲೆಮಾರಿ, ಕಾರ್ಮಿಕ ವರ್ಗದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಿ, ಮೂರು ದಿನದೊಳಗೆ ವರದಿ ನೀಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಈಗಾಗಲೇ ವಸತಿ ನಿಲಯಗಳಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಶೇ 5ಕ್ಕಿಂತ ಹೆಚ್ಚು ಪ್ರಮಾಣ ಪಾಸಿಟಿವ್ ಬಂದರೆ ಅಂತಹ ಮಕ್ಕಳನ್ನು ಪ್ರತ್ಯೇಕವಾಗಿರಿಸಿ, ಉಳಿದ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಬೇಕು ಎಂದರು.

ಜಿಲ್ಲೆಯಲ್ಲಿ ಸುಮಾರು 15–18 ವರ್ಷದೊಳಗಿನ 2 ಸಾವಿರ ಅಂಗವಿಕಲರಿದ್ದು, ಅವರೆಲ್ಲರಿಗೂ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು 2 ದಿನಗಳಿಗೊಮ್ಮೆ ಹೋಂ ಐಸೋಲೇಶನ್‌ನಲ್ಲಿರುವ ರೋಗಿಗಳನ್ನು ಕಡ್ಡಾಯವಾಗಿ ಭೇಟಿ ಮಾಡಬೇಕು. ಇಲ್ಲಿ ಯಾವುದೇ ರೋಗಿ ಮರಣ ಹೊಂದಿದರೆ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ಆರ್.ಸಿ.ಎಚ್ ಅಧಿಕಾರಿ ಕಾಂತರಾಜ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್. ಪ್ರಕಾಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹದೇವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.