ADVERTISEMENT

ಹಾಸನಾಂಬ ದೇವಿಯ ದರ್ಶನ ಪಡೆದ ಡಿಸಿಎಂ: ಶಿಸ್ತುಬದ್ಧ ವ್ಯವಸ್ಥೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:02 IST
Last Updated 15 ಅಕ್ಟೋಬರ್ 2025, 2:02 IST
   

ಹಾಸನ: ‘ಭಕ್ತರು ಹಾಗೂ ದೇವರ ನಡುವೆ ವ್ಯವಹರಿಸುವ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಅಚ್ಚುಕಟ್ಟಾದ ದರ್ಶನಕ್ಕೆ ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ’ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಪತ್ನಿ ಉಷಾ ಅವರೊಂದಿಗೆ ಹಾಸನಾಂಬ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾಸನಾಂಬ ದೇವಿಗೆ ಐತಿಹಾಸಿಕ ಹಿನ್ನೆಲೆ ಇದೆ. ಪ್ರತಿ ವರ್ಷ ದೇವಿಯ ದರ್ಶನಕ್ಕೆ ಬರುತ್ತಿದ್ದೇನೆ. ಈ ಬಾರಿ ಆಡಳಿತ ವ್ಯವಸ್ಥೆ ಶಿಸ್ತು ಬದ್ಧವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ’ ಎಂದರು.

‘ಕೆಲ ರಾಜಕಾರಣಿಗಳಿಗೆ ತೊಂದರೆ ಆಗಿರಬಹುದು. ಆದರೆ ಉತ್ತಮ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ, ಸರ್ಕಾರಿ ನೌಕರರು, ಸಿಬ್ಬಂದಿ‌ ಹಾಗೂ ಎಲ್ಲರಿಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ’ ಹೇಳಿದರು.

ADVERTISEMENT

‘ವಿಶೇಷವಾಗಿ ಏನಾದರೂ ಪ್ರಾರ್ಥನೆ ಮಾಡಿದ್ದೀರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನುಂಟು, ತಾಯಿ ಉಂಟು. ಎಲ್ಲರಿಗೂ ದೇವರು ನೆಮ್ಮದಿ ಕೊಡಲಿ. ಎಲ್ಲರ ಆಸೆ ಈಡೇರಿಸಲಿ. ಇಡೀ ರಾಜ್ಯಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ’ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ನಿನ್ನೆಯಿಂದ ಭಕ್ತರ ಸಂಖ್ಯೆ ದ್ವಿಗುಣವಾಗಿದ್ದು, ಪ್ರತಿ ನಿಮಿಷಕ್ಕೆ 150 ಮಂದಿಗೆ ದೇವರ ದರ್ಶನ ಪಡೆಯಲು ಸಮಯ ತಗುಲುತ್ತಿದೆ. ಈಗಲೂ 25 ಸಾವಿರದಿಂದ 30 ಸಾವಿರ ಮಂದಿ ಸಾಲಿನಲ್ಲಿ ನಿಂತಿದ್ದು, 7 ಕಿ.ಮೀ.ವರೆಗೂ ಸಾಲಿದೆ. ಇರುವಂತಹ ಸಮಯದಲ್ಲಿ ಭಕ್ತರು ದರ್ಶನ ಪಡೆದು ಸಹಕರಿಸುವಂತೆ’ ಮನವಿ ಮಾಡಿದರು.

ರಾಜ್ಯ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ವಾಗತಿಸಿದರು. ಸಂಸದ ಶ್ರೇಯಸ್ ಪಟೇಲ್, ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ.ಸಿಇಒ ಬಿ.ಆರ್ ಪೂರ್ಣಿಮಾ, ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ಇದ್ದರು.‌

ಇದಕ್ಕೂ ಮೊದಲು ಹಾಸನಾಂಬ ದೇವಿಯ ಗರ್ಭಗುಡಿಯಲ್ಲಿ ಪತ್ನಿಯೊಂದಿಗೆ 20 ನಿಮಿಷ ಪೂಜೆ ಸಲ್ಲಿಸಿದ ಡಿ.ಕೆ. ಶಿವಕುಮಾರ್, ಸಿದ್ಧೇಶ್ವರ ಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.