ADVERTISEMENT

ತಲೆ ಚಿಪ್ಪು ಅಳವಡಿಸಲು ವೈದ್ಯರ ನಿರಾಕರಣೆ

ಪ್ರಕರಣ ದಾಖಲಿಸಲು ಕೋರ್ಟ್‌ ನಿರ್ದೇಶನ ಅಡ್ಡಿ: ಗೊಂದಲದಲ್ಲಿ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 16:41 IST
Last Updated 22 ಜೂನ್ 2018, 16:41 IST
ರಾಜು
ರಾಜು   

ಹಾಸನ: ‘ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷದಿಂದ ರೋಗಿಗೆ ಹಾನಿಯುಂಟು ಮಾಡಿದ ವೈದ್ಯರ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ಅಡಿಯಾಗುತ್ತದೆಯೇ ಎನ್ನುವ ಬಗ್ಗೆ ಪೊಲೀಸರಲ್ಲಿಯೇ ಗೊಂದಲ ಉಂಟಾಗಿದೆ.

‘ಹೊಳೆನರಸೀಪುರ ಪಟ್ಟಣದ ಬಿ.ರಾಜು (62) ಅವರು ಮಿದುಳು ಶಸ್ತ್ರಚಿಕಿತ್ಸೆ ನಡೆಸಿದ ತಜ್ಞವೈದ್ಯರ ನಿರ್ಲಕ್ಷದಿಂದಾಗಿ ತಲೆ ಚಿಪ್ಪಿನ ಭಾಗವನ್ನು ಕಳೆದುಕೊಂಡಿದ್ದಾರೆ’ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಬಡಾವಣೆ ಠಾಣೆ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.

‘ಮೇ 23ರಂದು ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ನಿತ್ರಾಣರಾಗಿ ಕುಸಿದು ಬಿದ್ದ ಬಿ.ರಾಜು ಅವರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸಲಹೆಯಂತೆ ನಗರದ ಎನ್‌ಡಿಆರ್ ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನರರೋಗ ಶಸ್ತ್ರಚಿಕಿತ್ಸಕ ಡಾ.ಶ್ರೀಚೈತನ್ಯ ಅವರು ನಮ್ಮ ತಂದೆಗೆ ಮಿದುಳಿನಲ್ಲಿ ರಕ್ತ ಸೋರಿಕೆಯಾಗಿದೆ. ಅವರಿಗೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಅವರ ಸಲಹೆಯಂತೆ ಆಪರೇಷನ್ ಮಾಡಿಸಿದೆವು’ ಎಂದು ರಾಜು ಅವರ ಪುತ್ರಿ ಬಿ. ಶೋಭಾ ವಿವರಿಸಿದರು.

ADVERTISEMENT

‘ತಲೆಯ ಎಡಭಾಗದ ಚಿಪ್ಪನ್ನು ತೆಗೆದು ಮಿದುಳಿನ ರಕ್ತಸ್ರಾವ ತಡೆಗಟ್ಟಿರುವುದಾಗಿ ತಿಳಿಸಿದ ವೈದ್ಯರು, 3–4 ವಾರಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿ ತಲೆಯ ಚಿಪ್ಪನ್ನು ಅಳವಡಿಸುವುದಾಗಿ ತಿಳಿಸಿದರು. ಆದರೆ ವಾರ ಕಳೆದರೂ ಮತ್ತೊಂದು ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ನೀಡದೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ಹೇಳಿದರು. ಶಸ್ತ್ರಚಿಕಿತ್ಸೆ ವೇಳೆ ತೆಗೆದ ಬುರುಡೆಯ ಚಿಪ್ಪನ್ನು ಮರು ಅಳವಡಿಸುವ ಬಗ್ಗೆ ಕೇಳಿದಾಗ, ಚಿಪ್ಪಿಗೆ ಸೋಂಕು ತಗಲುವ ಸಾಧ್ಯತೆ ಇತ್ತು. ಹಾಗಾಗಿ ಅದನ್ನು ಎಸೆದಿದ್ದೇನೆ, ಅದರ ಬದಲಾಗಿ ಸ್ಟಂಟ್ ಅಳವಡಿಸುವುದಾಗಿ ತಿಳಿಸಿದರು. ತಲೆ ಚಿಪ್ಪನ್ನು ಎಸೆಯುವುದಾಗಿ ಇಲ್ಲವೇ ಅದರಿಂದ ಸೋಂಕು ತಗಲುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ವೈದ್ಯರ ನಿರ್ಲಕ್ಷದಿಂದಾಗಿಯೇ ಈ ರೀತಿಯಾಗಿದೆ’ ಎಂದು ಶೋಭಾ ಬಡಾವಣೆ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

‘ಈ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿಯನ್ನು ವಿಚಾರಿಸಿದಾಗ ಅವರು ಶೀಘ್ರವೇ ಮುಂದಿನ ಚಿಕಿತ್ಸೆ ಮಾಡಿಸಲಾಗುವುದು. ಈಗ ರೋಗಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅದರಂತೆ ಮೇ 31ರಂದು ಆಸ್ಪತ್ರೆ ವೆಚ್ಚ ₹ 2.45 ಲಕ್ಷ ಪಾವತಿಸಿ, ಮನೆಗೆ ಕರೆದೊಯ್ದು ವೈದ್ಯರು ನೀಡಿದ ಔಷಧ, ಮಾತ್ರೆ ನೀಡುತ್ತಿದ್ದೆವು. ಸ್ವಲ್ಪ ದಿನದ ಬಳಿಕ
ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯದರ್ಶಿಯನ್ನು ಸಂಪರ್ಕಿಸಿದರೆ ಆಪರೇಷನ್‌ ಮಾಡಿದ ವೈದ್ಯರು ರಜೆಯಲ್ಲಿದ್ದಾರೆ ಎಂದರು. ಎನ್.ಡಿ.ಆರ್.ಕೆ. ಆಸ್ಪತ್ರೆ ಹಾಗೂ ವೈದ್ಯ ಶ್ರೀಚೈತನ್ಯ ಅವರ ಅಜಾಗರೂಕತೆಯಿಂದಾಗಿ ತಂದೆ ಪ್ರಾಣ ಅಪಾಯಕ್ಕೆ ಸಿಲುಕಿದೆ. ತಲೆ ಚಿಪ್ಪು ಇಲ್ಲದ ಕಾರಣ ಅವರ ತಲೆಯಲ್ಲಿನ ರಕ್ತ ಸಂಚಾರದಿಂದಾಗುತ್ತಿರುವ ಏರುಪೇರು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕರ್ತವ್ಯ ಲೋಪ ಎಸಗಿದ ಆಸ್ಪತ್ರೆ ಮಾಲೀಕರು, ಮುಖ್ಯ ಆಡಳಿತಾಧಿಕಾರಿ ಹಾಗೂ ಡಾ.ಶ್ರೀಚೈತನ್ಯ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ಜೂನ್ 20ರಂದೇ ದೂರು ಸ್ವೀಕರಿಸಿದ ಬಡಾವಣೆ ಠಾಣೆ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಬದಲಾಗಿ ಹೊಸ ಸುತ್ತೋಲೆ ಪ್ರಕಾರವಾಗಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ವೈದ್ಯಕೀಯ ಮಂಡಳಿಗೆ ದೂರು
‘ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸೆ ತಡೆ ಕಾಯ್ದೆ ಪ್ರಕಾರವಾಗಿ ವೈದ್ಯರ ಮೇಲಿನ ನಿರ್ಲಕ್ಷ್ಯ ಆರೋಪಗಳಿಗೆ ಪ್ರಥಮ ವರ್ತಮಾನ ವರದಿ ದಾಖಲಿಸುವಂತಿಲ್ಲ. ಯಾರಾದರೂ ದೂರು ನೀಡಿದರೆ ಜಿಲ್ಲಾ ವೈದ್ಯಕೀಯ ಮಂಡಳಿಗೆ ಕಳುಹಿಸುತ್ತೇವೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರ್‌ವಾಡ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.