ADVERTISEMENT

ಡಾ. ಎಸ್.ಎಲ್.ಭೈರಪ್ಪನವರ ಸೇವೆಗೆ ‘ಭಗೀರಥ ಸ್ವರೂಪಿ’ ಬಿರುದು ನೀಡಿ ಇಂದು ಸನ್ಮಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 6:46 IST
Last Updated 9 ಮಾರ್ಚ್ 2025, 6:46 IST
ಸಾಹಿತಿ ಡಾ.ಭೈರಪ್ಪನವರ ಪರಿಶ್ರಮದಿಂದ ಏತ ನೀರಾವತಿ ಯೋಜನೆ ಪೂರ್ಣಗೊಂಡು ಹುಟ್ಟೂರು ನುಗ್ಗೇಹಳ್ಳಿ ಹೋಬಳಿಯ ಸಂತೇಶಿವರ ಗ್ರಾಮದ ಕೆರೆಗೆ ನೀರು ಬಂದಿರುವುದು.
ಸಾಹಿತಿ ಡಾ.ಭೈರಪ್ಪನವರ ಪರಿಶ್ರಮದಿಂದ ಏತ ನೀರಾವತಿ ಯೋಜನೆ ಪೂರ್ಣಗೊಂಡು ಹುಟ್ಟೂರು ನುಗ್ಗೇಹಳ್ಳಿ ಹೋಬಳಿಯ ಸಂತೇಶಿವರ ಗ್ರಾಮದ ಕೆರೆಗೆ ನೀರು ಬಂದಿರುವುದು.   

ನುಗ್ಗೇಹಳ್ಳಿ: ತಾನು ಹುಟ್ಟಿದ ಊರಿಗೆ ಏನಾದರೂ ಒಳ್ಳೆಯ ಕೆಲಸ ಮಾಡುವ ಉದ್ದೇಶದಿಂದ ಕಾದಂಬರಿಕಾರ ಪ್ರೊ.ಎಸ್.ಎಲ್. ಭೈರಪ್ಪನವರು, ಗ್ರಾಮದ ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಪಡೆದಿದ್ದು, ಅವರಿಗೆ ಭಗೀರಥ ಸ್ವರೂಪಿ ಬಿರುದು ನೀಡಿ ಗ್ರಾಮಸ್ಥರು ಸನ್ಮಾನಿಸುತ್ತಿದ್ದಾರೆ.

ಬೈರಪ್ಪನವರ ಹುಟ್ಟೂರು ಸಂತೇಶಿವರ ಗ್ರಾಮದಲ್ಲಿ ಮಾರ್ಚ್ 9 ರಂದು ಸಂತೇಶಿವರ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಕೃತಜ್ಞತಾರ್ಪಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಭೈರಪ್ಪ ಅವರನ್ನು ದ್ಯಾವಲಾಪುರ ಗೇಟ್‌ನಿಂದ ಅದ್ದೂರಿ ಮೆರವಣಿಗೆಯೊಂದಿಗೆ ಸಂತೇಶಿವರ ಗ್ರಾಮದವರೆಗೆ ಕರೆತಂದು ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದರಾದ ಶ್ರೇಯಸ್ ಪಟೇಲ್, ಡಾ.ಸಿ.ಎನ್. ಮಂಜುನಾಥ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಸಚಿವರಾದ ಬಿ.ಸಿ. ನಾಗೇಶ್, ಮಾಧುಸ್ವಾಮಿ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಮಾಜಿ ಶಾಸಕರು, ಸಾಹಿತಿಗಳು ಭಾಗವಹಿಸಲಿದ್ದಾರೆ.

ADVERTISEMENT

ಬೈರಪ್ಪನವರ ಪರಿಶ್ರಮ: ತಮ್ಮ ಹುಟ್ಟೂರಿಗೆ ಏನಾದರೂ ಶಾಶ್ವತ ಕೆಲಸ ಮಾಡುವ ಉದ್ದೇಶದಿಂದ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದ ಪ್ರೊ.ಭೈರಪ್ಪ, ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ₹25 ಕೋಟಿ ಬಿಡುಗಡೆ ಮಾಡಿಸುವಲ್ಲಿ ಹೆಚ್ಚು ಪರಿಶ್ರಮ ಪಟ್ಟಿದ್ದರು. ಯೋಜನೆ ಪೂರ್ಣಗೊಂಡು ಈ ಹಂಗಾಮಿನಲ್ಲಿ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಾಗಿದೆ.

ದಶಕಗಳ ಕಾಲ ಈ ಭಾಗದ ಕೆರೆಗಳು ತುಂಬದೇ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದರು. ಇದನ್ನು ಮನಗಂಡ ಸಾಹಿತಿ ಪ್ರೊ.ಭೈರಪ್ಪ, ಏತ ನೀರಾವರಿ ಅನುಷ್ಠಾನಕ್ಕೆ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಹೇಮಾವತಿ ಮುಖ್ಯನಾಲೆಯ ಕಾರೇಹಳ್ಳಿ ಬಳಿಯ ಜಾಬ್‌ಘಟ್ಟ ಗ್ರಾಮದ ನಾಗಮಂಗಲ ಉಪ ನಾಲೆಯಿಂದ ಸುಮಾರು 11 ಕಿ.ಮೀ. ಪೈಪ್‌ಲೈನ್‌ನಿಂದ ನೀರು ತರುವ ಮೂಲಕ ರಾಂಪುರ ಗೇಟ್ ಬಳಿ ಇರುವ ವಿತರಣಾ ತೊಟ್ಟಿಯಿಂದ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮದ ಕೆರೆಗಳಿಗೆ ನೀರು ಹರಿಸಲಾಗಿದೆ. ಯೋಜನೆಯಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಈ ಯೋಜನೆ ಬೇಗ ಪೂರ್ಣಗೊಳ್ಳುವಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಕೂಡ ಶ್ರಮ ವಹಿಸಿದ್ದು, ಯೋಜನೆಯಿಂದ 20ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತಿರುವುದು ವಿಶೇಷ.

ತೆಪ್ಪದಲ್ಲಿ ಕೆರೆ ವೀಕ್ಷಿಸಿದ ಪ್ರೊ.ಭೈರಪ್ಪ: ತಮ್ಮ ಹುಟ್ಟೂರು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಕ್ಕೆ ಬಂದ ಪ್ರೊ.ಭೈರಪ್ಪ, ತಮ್ಮ ಕುಟುಂಬದ ಸದಸ್ಯರೊಂದಿಗೆ ತೆಪ್ಪದಲ್ಲಿ ಕೆರೆ ವೀಕ್ಷಿಸಿ ಸಂತಸ ಪಟ್ಟರು.

ಈ ಭಾಗದ ರೈತರಿಗೆ ಅನುಕೂಲಕ್ಕಾಗಿ ಇಳಿ ವಯಸ್ಸಿನಲ್ಲೂ ಶ್ರಮಪಟ್ಟು ಯೋಜನೆ ಸಾಕಾರಗೊಳಿಸಿದ್ದಾರೆ. ಭೈರಪ್ಪ ಅವರನ್ನು ಪಕ್ಷಾತೀತವಾಗಿ ಗೌರವಿಸಲು ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜಣ್ಣ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ
ಭೈರಪ್ಪನವರು ಸಂತೇಶಿವರದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಅವರ ತಾಯಿ ದಿವಂಗತ ಗೌರಮ್ಮ ಟ್ರಸ್ಟ್ ವತಿಯಿಂದ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಕೆರೆಗೆ ನೀರು ಹರಿಸಿದ್ದಾರೆ.
ಹೇಮಂತ್ ಕುಮಾರ್ ಎಸ್.ಆರ್. ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.