ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಬೆಳೆ ತುಳಿದು ಹಾನಿಪಡಿಸುತ್ತಿವೆ.
ಕೊಡಗಿನ ಕಾಡಂಚಿನ ಗಡಿ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಆನೆಗಳು ಲಗ್ಗೆ ಇಡುತ್ತಿವೆ. ಪಾರಸನಹಳ್ಳಿ ಗ್ರಾಮದಲ್ಲಿ ರೈತರು ಬೆಳೆದ ಭತ್ತ, ಜೋಳ, ಅಡಿಕೆ, ಬಾಳೆ, ಕಾಫಿ ತೋಟಗಳಿಗೆ ನುಗ್ಗಿದ್ದ ಮೂರು ಕಾಡಾನೆಗಳು ನೆಲಬಳ್ಳಿ ಭಾಗದಲ್ಲಿ ಜೋಳ ಮತ್ತಿತರ ಬೆಳೆಗಳನ್ನು ತುಳಿದು ನಾಶಪಡಿಸಿವೆ.
ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ಹೊರ ಬಂದು ರೈತರು ಬೆಳೆದ ಬೆಳೆ ಜಮೀನುಗಳ ಮೇಲೆ ದಾಳಿ ನಡೆಸುತ್ತಿವೆ. ಹೀಗಾಗಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಾಶವಾಗಿ ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಆನೆಗಳ ಕಾಟದಿಂದ ಬೇಸತ್ತು ಬೆಳೆ ಬೆಳೆಯುವುದನ್ನು ನಿಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಾರಸನಹಳ್ಳಿ ರೈತ ಮೋಹನ್ ನೋವು ತೋಡಿಕೊಂಡರು.
ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಪ್ರತಿನಿತ್ಯ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದರೂ ರಾತ್ರಿ ವೇಳೆ ಆನೆಗಳು ದಾಳಿ ನಡೆಸುವುದು ನಿಂತಿಲ್ಲ. ಆನೆಗಳ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು. ಬೆಳೆ ಹಾನಿ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.