ಹಾಸನ: ಜಿಲ್ಲೆಯಲ್ಲಿ ಆನೆಗಳ ಉಪಟಳ ಹೆಚ್ಚುತ್ತಿದ್ದು, ಆನೆಧಾಮ ನಿರ್ಮಾಣ ಮಾಡುವಂತೆ ಒತ್ತಡಗಳೂ ಕೇಳಿ ಬರುತ್ತಿವೆ. ಈಗಾಗಲೇ ರಾಜ್ಯ ಸರ್ಕಾರ ಭದ್ರಾ ಅಭಯಾರಣ್ಯದಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಆನೆ ಧಾಮ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದು, ₹20 ಕೋಟಿ ಮೀಸಲಿಟ್ಟಿದೆ.
ಕೇವಲ ₹20 ಕೋಟಿ ಮೀಸಲಿಟ್ಟಿರುವುದು ಏತಕ್ಕೂ ಸಾಲುವುದಿಲ್ಲ ಎನ್ನುವ ಆರೋಪ ಬಿಜೆಪಿ ಶಾಸಕರಿಂದ ಕೇಳಿ ಬರುತ್ತಿದೆ. ಈ ಮಧ್ಯೆ ಕೇಂದ್ರದ ಅಂಗಳಕ್ಕೆ ಚೆಂಡು ಕೊಂಡೊಯ್ದಿರುವ ಸಂಸದ ಶ್ರೇಯಸ್ ಪಟೇಲ್, ‘ಪರಿಹಾರ ಅರಣ್ಯೀಕರಣ ನಿಧಿ (ಕಾಂಪಾ) ಅಡಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕಾಡಾನೆ ಹಾವಳಿ ಪ್ರಮುಖವಾಗಿದೆ. ಕಾಡಾನೆಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕಾಡಾನೆ-ಮಾನವ ಸಂಘರ್ಷ ಜಟಿಲವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಸಂಸದ ಶ್ರೇಯಸ್, ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಮಸ್ಯೆ ನಿವಾರಣೆಗೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಭಾಗದ 8 ಗ್ರಾಮಗಳ 416 ರೈತರು ಒಟ್ಟು 2261.21 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ.
2012 ರಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಸಮಿತಿಯು, ಈ ಸಂಬಂಧ ಸಮಗ್ರ ವರದಿ ತಯಾರಿಸಿದೆ. ಹೆತ್ತೂರು ಭಾಗದಲ್ಲಿ ಕಾಡಾನೆಗಳು ಹೆಚ್ಚಿರುವುದರಿಂದ ಅಲ್ಲಿನ ರೈತರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಸೂಕ್ತ ಪರಿಹಾರ ಕಲ್ಪಿಸಿದರೆ ಭೂಮಿ ನೀಡಲು ಈಗಲೂ ರೈತರು ಸಿದ್ಧರಿದ್ದಾರೆ.
ರಕ್ಷಿತಾರಣ್ಯದ ಅಂಚಿನ ಸುಮಾರು 3,300 ಎಕರೆ ಹಿಡುವಳಿ ಖಾಸಗಿ ಪ್ರದೇಶ ಹಾಗೂ ಸುತ್ತಲಿನ 15 ಸಾವಿರ ಎಕರೆ ಡೀಮ್ಡ್ ಫಾರೆಸ್ಟ್ ಜಾಗವೂ ಸೇರಿದಂತೆ 20 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ವಿಸ್ತರಣೆ ಮಾಡಬೇಕು ಎನ್ನುವ ಸಲಹೆಗಳು ಮಲೆನಾಡಿನ ಜನರಿಂದ ಕೇಳಿ ಬರುತ್ತಿವೆ.
ಆನೆ ಕಾರಿಡಾರ್ ಕೈಬಿಟ್ಟಿದ್ದ ಸರ್ಕಾರ: ಆನೆ ಕಾರಿಡಾರ್ ನಿರ್ಮಾಣಕ್ಕೆ ಬಂಧಿಸಿದಂತೆ 2011 ರಲ್ಲಿ ನಡೆದ ಸಭೆಯಲ್ಲಿ ಬೇಲೂರು, ಸಕಲೇಶಪುರ ತಾಲ್ಲೂಕಿನ 7 ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ 30 ಗ್ರಾಮಗಳ ವ್ಯಾಪ್ತಿಯ ಒಟ್ಟು 23,25,424 ಎಕರೆ ಅರಣ್ಯ ಲಕ್ಷಣ ಹೊಂದಿರುವ ಸರ್ಕಾರಿ ಜಮೀನಿ ಹಾಗೂ ರೈತರ ಹಿಡುವಳಿಯ 2,500 ಎಕರೆ ಪ್ರದೇಶವನ್ನೂ ಸೇರಿಸಬಹುದು. ಖಾಸಗಿ ರೈತರ ಜಮೀನು ಸ್ವಾಧೀನ ಪಡಿಸಿಕೊಂಡು, ಅರಣ್ಯ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಗಿತ್ತು.
ಆದರೆ, ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಒಪ್ಪಿಗೆ ದೊರೆಯದೇ 2014 ರಲ್ಲಿ ಆನೆ ಕಾರಿಡಾರ್ ಯೋಜನೆ ಕೈಬಿಡಲಾಗಿತ್ತು. ಇದೀಗ ಸಂಸದ ಶ್ರೇಯಸ್ ಪಟೇಲ್ ಮತ್ತೊಮ್ಮೆ ಈ ಯೋಜನೆಗೆ ಜೀವ ತುಂಬುವ ಪ್ರಯತ್ನ ನಡೆಸಿದ್ದು, ಇದೀಗ ಚೆಂಡು ಕೇಂದ್ರದ ಅಂಗಳಕ್ಕೆ ಬಿದ್ದಿದೆ.
ಆನೆ ಕಾರಿಡಾರ್ ಒಂದೇ ಜಿಲ್ಲೆಯ ಜನರಿಗೆ ನೆಮ್ಮದಿ ಬದುಕು ಕಲ್ಪಿಸುವ ದಾರಿ. ಈ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದು ಉದ್ದೇಶಿತ ಯೋಜನೆಗೆ ಅನುದಾನ ನೀಡುವ ಮೂಲಕ ನೆರವಾಗಲು ಪ್ರಸ್ತಾವ ಸಲ್ಲಿಸಲಾಗಿದೆ.ಶ್ರೇಯಸ್ ಪಟೇಲ್, ಸಂಸದ
ಆನೆ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೇವಲ ₹20 ಕೋಟಿ ಮೀಸಲಿಟ್ಟಿದ್ದು ಏತಕ್ಕೂ ಸಾಲುವುದಿಲ್ಲ. ಕನಿಷ್ಠ ₹1 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಈ ಬಗ್ಗೆ ಸಂಸದರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಬೇಕು.ಎಚ್.ಕೆ. ಸುರೇಶ್, ಬೇಲೂರು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.