ADVERTISEMENT

ನ್ಯಾಯ ಕೇಳಿದವರ ಮೇಲೆಯೇ ಪ್ರಕರಣ: ಆಕ್ರೋಶ

ಅರ್ಜುನ ಸಾವಿನ ಪ್ರಕರಣದಲ್ಲಿ ಸಮನ್ಸ್‌: ಮಲೆನಾಡು ರಕ್ಷಣಾ ಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:00 IST
Last Updated 17 ಡಿಸೆಂಬರ್ 2025, 6:00 IST
ಮಲೆನಾಡು ರಕ್ಷಣಾ ಸೇನೆ ಕಾರ್ಯಕರ್ತರು ಮಂಗಳವಾರ ಸಕಲೇಶಪುರದ ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು 
ಮಲೆನಾಡು ರಕ್ಷಣಾ ಸೇನೆ ಕಾರ್ಯಕರ್ತರು ಮಂಗಳವಾರ ಸಕಲೇಶಪುರದ ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು    

ಸಕಲೇಶಪುರ: ನ್ಯಾಯಯುತ ಹೋರಾಟ ಮಾಡಿದ್ದ ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಆರ್‌. ಮಂಜುನಾಥ್, ಪರಿಸರವಾದಿ ಹುರುಡಿ ವಿಕ್ರಂ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್ ಸೇರಿದಂತೆ 16 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸುವ ಮೂಲಕ ಪ್ರತಿಭಟನಕಾರರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಮಲೆನಾಡು ರಕ್ಷಣಾ ಸೇನೆ ಕಾರ್ಯಕರ್ತರು, ಮಂಗಳವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.

ಎರಡು ವರ್ಷಗಳ ಹಿಂದೆ ಯಸಳೂರು ಬಳಿ ದಬ್ಬಳಿಕಟ್ಟೆಯಲ್ಲಿ ದಸರಾ ಆನೆ ಅರ್ಜುನ ಹಾಗೂ ಕಾಡಾನೆ ಕಾಳಗದಲ್ಲಿ ಅರ್ಜುನ ಮರಣ ಹೊಂದಿತ್ತು. ಈ ಭಾಗದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೇ ಇದ್ದುದರಿಂದ ಸಿಟ್ಟಿಗೆದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ 2 ವರ್ಷಗಳ ನಂತರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ಸರ್ಕಾರ ಪ್ರಜಾಪ್ರಭುತ್ವ ಹತ್ತಿಕ್ಕುವ ಕುತಂತ್ರ ಎಂದು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಾಗರ್ ಜಾನೇಕೆರೆ ಆರೋಪಿಸಿದರು.

ನ್ಯಾಯ ಕೇಳುವುದು ಅಪರಾಧವೇ? ಆನೆ ಸಾವಿನ ಸತ್ಯಾಂಶ ಬಹಿರಂಗಪಡಿಸುವ ಬದಲು ಹೋರಾಟಗಾರರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸುವುದು ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಅರ್ಜುನ ಆನೆಯ ಸಾವಿನ ಹಿಂದೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಇರುವ ಸಾಧ್ಯತೆ ಮರೆಮಾಚಲು ಸರ್ಕಾರ ವಾಮಮಾರ್ಗ ಹಿಡಿದಿದೆ ಎಂದು ದೂರಿದರು.

ADVERTISEMENT

ಇದೇ ಸರ್ಕಾರ ಈ ಹಿಂದೆ ರೈತರ ಪರವಾಗಿ ಹೋರಾಟ ನಡೆಸಿದ ನಮ್ಮ ಸಂಘದ ಕಾರ್ಯಕರ್ತರ ಮೇಲೂ ಬಲ ಪ್ರಯೋಗ ಮಾಡಿ ಪ್ರಕರಣ ದಾಖಲಿಸಿ ಹೋರಾಟದ ದಿಕ್ಕು ತಪ್ಪಿಸಲು ಯತ್ನಿಸಿದೆ. ಇದು ಸ್ಪಷ್ಟವಾದ ದ್ವೇಷ ರಾಜಕಾರಣ ಎಂದು ಟೀಕಿಸಿದರು. 

ಅರ್ಜುನ ಆನೆಯ ಸಾವಿನ ಕುರಿತಾಗಿ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸೇನೆಯ ತಾಲ್ಲೂಕು ಅಧ್ಯಕ್ಷ ಮಂಜುದೇವ್ ಹುಲ್ಲಹಳ್ಳಿ, ತಾಲ್ಲೂಕು ಹೋಂ ಸ್ಟೇ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಸನ್ನ ಹಾಗೂ ಇತರರು ಇದ್ದರು.

‘ಪ್ರಕರಣ ಹಿಂಪಡೆಯಿರಿ’

ಹೆತ್ತೂರು: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅಂಬಾರಿ ಆನೆ ಅರ್ಜುನನ ಸಮಾಧಿ ಸ್ಮಾರಕಕ್ಕೆ ಸಂಬಂಧಪಟ್ಟಂತೆ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು 19 ಮಂದಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇದು ಖಂಡನೀಯ ಎಂದು ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಗಂಗಾಧರ್‌ ದೂರಿದ್ದಾರೆ. 

ಅರ್ಜುನನ 19 ಮಂದಿ ಅಭಿಮಾನಿಗಳಿಗೆ ಸಮನ್ಸ್ ಜಾರಿ ಮಾಡಿರುವ ಸರ್ಕಾರದ ಕ್ರಮ ಸರಿ ಇಲ್ಲ. ಇದು ಸಾಮಾಜಿಕ ಚಿಂತನೆ ಮಾಡುವ ಬೆಳೆಗಾರರನ್ನು ಹತ್ತಿಕುವ ಕೆಲಸವಾಗಿದೆ. ಸರ್ಕಾರ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ನೀಯಮದಲ್ಲಿ ಸಮನ್ಸ್ ನೀಡಿದವರನ್ನು ಪ್ರಕರಣದಿಂದ ಖುಲಾಸೆ ಮಾಡಬೇಕು ಎಂದು ಯಸಳೂರು ಹೋಬಳಿ ಬೆಳೆಗಾರರ ಸಂಘ ಕೆಜಿಎಫ್ ಹಾಗೂ ಎಚ್‌ಡಿಪಿಎ ಅಧ್ಯಕ್ಷರು ನಿರ್ದೇಶಕರು ಪದಾಧಿಕಾರಿಗಳ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.