ADVERTISEMENT

ಬೇಲೂರು: ಆರು ಕಾಡಾನೆಗಳು ಪ್ರತ್ಯಕ್ಷ

ಮುತ್ತೊಡಿ ಅರಣ್ಯಕ್ಕೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 13:01 IST
Last Updated 15 ಅಕ್ಟೋಬರ್ 2020, 13:01 IST
ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಮೀಪದ ಜಮೀನಿನಲ್ಲಿ ಗುರುವಾರ ಪ್ರತ್ಯಕ್ಷವಾಗಿದ್ದ ಕಾಡಾನೆಗಳು
ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಮೀಪದ ಜಮೀನಿನಲ್ಲಿ ಗುರುವಾರ ಪ್ರತ್ಯಕ್ಷವಾಗಿದ್ದ ಕಾಡಾನೆಗಳು   

ಬೇಲೂರು: ಇಲ್ಲಿನ ಬಿಕ್ಕೋಡು ರಸ್ತೆಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಮೀಪ ಗುರುವಾರ ಬೆಳಿಗ್ಗೆ ಆರು ಕಾಡಾನೆಗಳು ಪ್ರತ್ಯಕ್ಷವಾಗಿದ್ದವು.

ಕಳೆದ ಐದು ದಿನಗಳಿಂದ ತಾಲ್ಲೂಕಿನ ಬಿಕ್ಕೋಡು, ಅರೇಹಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಎರಡು ಪ್ರತೇಕ ಕಾಡಾನೆಗಳ ಹಿಂಡು ಸಂಚರಿಸುತ್ತಿದೆ. 20 ಆನೆಗಳಿರುವ ಹಿಂಡು ಚಿಕ್ಕಮಗಳೂರು ವಲಯ ತಲುಪಿದೆ. ಆದರೆ, ಆರು ಆನೆಗಳಿರುವ ಹಿಂಡು ಕೋಗಿಲಮನೆ, ಹಿರೀಕೊಲೆ, ಬಿಟ್ರವಳ್ಳಿ, ಪ್ರಸಾದಿಹಳ್ಳಿ, ಸನ್ಯಾಸಿಹಳ್ಳಿ, ಮಲ್ಲಾಪುರ ಗ್ರಾಮಗಳಲ್ಲಿ ಸಂಚರಿಸಿದ್ದು, ಗುರುವಾರ ಬೇಲೂರು ಚಿಕ್ಕಳ್ಳದ ಆಸುಪಾಸಿನಲ್ಲಿ ಬೀಡುಬಿಟ್ಟಿತ್ತು. ಈ ಭಾಗದ ಜೋಳ, ಭತ್ತ, ತೆಂಗು ಬೆಳೆಗಳನ್ನು ನಾಶಪಡಿಸಿವೆ.

ಕಾಡಾನೆಗಳನ್ನು ನೋಡಲು ಬೇಲೂರು ಪಟ್ಟಣದ ಜನರು ಮುಗಿಬಿದ್ದರು. ಮನೆಯ ಚಾವಣಿ ಮೇಲೆ ನಿಂತು ಆನೆಗಳನ್ನು ವೀಕ್ಷಿಸಿದರು. ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಟ್ಟರು.

ADVERTISEMENT

ಆರು ಆನೆಗಳ ಹಿಂಡನ್ನು ಮುತ್ತೊಡಿ ಅರಣ್ಯಕ್ಕೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜನರು ಕಾಡಾನೆಗಳಿಗೆ ತೊಂದರೆ ಕೊಡಬಾರದು. ಬೆಳೆ ಹಾನಿಗೆ ಪರಿಹಾರವನ್ನು ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಯಾಶ್ಮಾ ಮಾಚಮ್ಮ ತಿಳಿಸಿದರು.

ಕಾಡಾನೆಗಳ ಕಾರ್ಯಾಚರಣೆಯನ್ನು ವೀಕ್ಷಿಸಿದ ಶಾಸಕ ಕೆ.ಎಸ್.ಲಿಂಗೇಶ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಎರಡು ದಿನಗಳಲ್ಲಿ ಕಾಡಾನೆಗಳನ್ನು ಹಿಮ್ಮೆಟ್ಟಿಸಲಾಗುವುದು. ಕಾಡುಗಳ ನಾಶದಿಂದ ವನ್ಯಜೀವಿಗಳು ಆಹಾರ ಹುಡುಕಿಕೊಂಡು ನಾಡಿಗೆ ಬರುವಂತಾಗಿದೆ.ಕಾಡಾನೆಗಳಿಂದ ನಾಶವಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಈ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಸಿಪಿಐ ಸಿದ್ದರಾಮೇಶ್ವರ್, ಪಿಎಸ್ಐ ಅಜಯಕುಮಾರ್, ಅರಣ್ಯರಕ್ಷಕ ಸುಭಾಷ್ ಹಾಗೂ ವೇದಮೂರ್ತಿ, ಅರಣ್ಯ ರಕ್ಷಕ ನಾಗರಾಜ್, ಸೋಮೇಗೌಡ, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.