ಕೊಣನೂರು: ಆನೆಗಳ ಹಾವಳಿಯಿಂದ ಬೇಸತ್ತಿರುವ ರೈತರು ಬೆಳೆದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ರಾತ್ರಿಯಾಗುತ್ತಿದ್ದಂತೆಯೇ ಜಮೀನಿಗೆ ಗಂಪುಗುಂಪಾಗಿ ನುಗ್ಗುವ ಆನೆಗಳು, ಬೆಳೆದು ನಿಂತಿರುವ ಬೆಳೆಗಳನ್ನು ಮನಬಂದಂತೆ ತುಳಿದು, ತಿಂದು ಹೋಗುತ್ತಿವೆ. ಇದನ್ನು ಕಂಡು ಏನು ಮಾಡಲಾಗದೇ, ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಆಗದೇ, ಹಾಳಾದ ಬೆಳೆಗಳಿಗೆ ಪರಿಹಾರವನ್ನೂ ಪಡೆಯಲಾಗದೇ ಚಿಂತಾಕ್ರಾಂತರಾಗಿದ್ದಾರೆ.
ಕೊಡಗಿನ ಅರಣ್ಯದಂಚಿನಲ್ಲಿರುವ ಕೊಣನೂರು ಹೋಬಳಿಯ ತರಿಗಳಲೆ ಗ್ರಾಮದ ರೈತರ ಪಾಡು ಇದಾಗಿದ್ದು, ಸಂಜೆ ಆಯಿತೆಂದರೆ ಕೆಲವರು ಆನೆಗಳು ತಮ್ಮ ಜಮೀನಿಗೆ ಬರದಂತೆ ಕಾಯಲು ಹೊರಡುವುದು, ಬೆಳಗಾಗುತ್ತಿದ್ದಂತೆ ಹಾನಿಯಾಗಿರುವ ಬೆಳೆಗಳನ್ನು ನೋಡಿ ಬೇಸರ ವ್ಯಕ್ತಪಡಿಸುವುದು ಸಾಮಾನ್ಯದ ವಿಷಯವಾಗಿದೆ.
ತರಿಗಳಲೆ ಗ್ರಾಮದ ಕೊಡಗಿನ ನಿಡ್ತ ವಲಯ ಅರಣ್ಯಕ್ಕೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಕೃಷಿ ಮಾಡುವ ರೈತರ ಪ್ರತಿವರ್ಷದ ಪಾಡಾಗಿದ್ದು, ಆನೆ ಸಮಸ್ಯೆಗೆ ಪರಿಹಾರ ಸಿಗದೇ ರೈತರು ದಿಕ್ಕು ತೋಚದಾಗಿದ್ದಾರೆ. ಮೆಕ್ಕೆ ಜೋಳ, ಸಿಹಿಗೆಣಸು, ಮರಗೆಣಸು, ಶುಂಠಿ, ಭತ್ತದ ಬೆಳೆಯನ್ನು ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ರಾತ್ರಿ ವೇಳೆ ಕಾಡಿನಿಂದ ಹೊರಬರುವ ಆನೆಗಳು ಮನಬಂದಂತೆ ತಿನ್ನುತ್ತವೆ.
ಕೆಲವೊಮ್ಮೆ ಆನೆಗಳ ಹಿಂಡು ತಿನ್ನದೇ ಜಮೀನಿನ ಮೇಲೆ ಹೋದರೂ ಮಣ್ಣಿನೊಳಗೆ ಗಡ್ಡೆಯ ರೂಪದಲ್ಲಿರುವ ಬೆಳೆಗಳು ತುಳಿತದಿಂದಲೇ ಹಾಳಾಗುತ್ತವೆ. ಕೆಲ ರೈತರು ತೆಂಗು, ಅಡಿಕೆ ಬೆಳೆಯನ್ನು ಮಾಡಿದ್ದು, ಕೆಲವೊಮ್ಮೆ ಆನೆಗಳು ತೆಂಗಿನ ಸಸಿ ಮತ್ತು ಮರಗಳ ಸುಳಿ ಮತ್ತು ಗರಿಗಳನ್ನು ಎಳೆದು ಹಾಕುತ್ತಿವೆ. ಸಿಟ್ಟು ಬಂದ ಸಮಯದಲ್ಲಿ ಅಡಿಕೆ ಮರಗಳನ್ನು ಮುರಿದಿರುವ ಉದಾಹರಣೆಗಳು ಇವೆ. ಭತ್ತದ ಗದ್ದೆಗಳಲ್ಲಿ ಆನೆಗಳು ಕಾಲಿಟ್ಟು ಭತ್ತದ ಪೈರು ಮಣ್ಣಿಗೆ ಸೇರುತ್ತಿವೆ.
ಆನೆಗಳು ಬಂದೇ ಬರುತ್ತವೆ ಎಂದು ರೈತರು ಕಾದು ಕುಳಿತು, ಪಟಾಕಿ ಸಿಡಿಸಿ, ಕೂಗಾಡುತ್ತಿದ್ದರೂ, 4 ಕಡೆ ಹೊರಗೆ ಬರಲು ಜಾಗ ಮಾಡಿಕೊಂಡಿರುವ ಆನೆಗಳು, ಜನಗಳಿರುವ ಸ್ಥಳ ಬಿಟ್ಟು ಬೇರೆಡೆ ಹೊರಗೆ ಬರುತ್ತಿವೆ. ಕೆಲವೊಮ್ಮೆ ಪಟಾಕಿಯ ಶಬ್ದ ಕಡಿಮೆ ಆಗುತ್ತಿದ್ದಂತೆ ನಿರ್ಭಯವಾಗಿ ಆನೆಗಳು ಕಾಡಿನಿಂದ ಹೊರಬಂದು ಬೆಳೆಗಳನ್ನು ಹಾಳುಮಾಡುತ್ತಿವೆ.
ಹಿಂಡಿನಲ್ಲಿ ಬರುವ ಆನೆಗಳು ಬೆಳೆಯನ್ನು ತಿಂದು ಬೆಳಗಾಗುವಷ್ಟರಲ್ಲಿ ಕಾಡಿಗೆ ಹಿಂದುರಿಗಿದರೆ, ಕೆಲವೊಮ್ಮೆ ಒಂಟಿ ಆನೆಗಳು ಕಾಡಿನಿಂದ ಹೊರಬಂದು ಮನಸೋ ಇಚ್ಛೆ ಎಲ್ಲೆಂದರಲ್ಲಿ ಅಡ್ಡಾಡಿ ಭಯ ಹುಟ್ಟಿಸುತ್ತವೆ.
ಜಿಲ್ಲೆಯ ಗಡಿ ಗ್ರಾಮವಾದ ತರಿಗಳಲೆ ಗ್ರಾಮದ ಮೂಲಕ ಕೊಡಗು ಜಿಲ್ಲೆಗೆ ಹೋಗಬೇಕಿರುವ ರಸ್ತೆಯಲ್ಲೇ ಆನೆಗಳು ಸಂಚರಿಸುತ್ತಿದ್ದು, ಸಂಜೆ ಆಯಿತೆಂದರೆ ಆ ರಸ್ತೆಯಲ್ಲಿ ಸಂಚರಿಸುವವರು ಜೀವ ಕೈಯಲ್ಲಿ ಹಿಡಿದು ಸಾಗುತ್ತಾರೆ. ತರಿಗಳಲೆ ಆಸುಪಾಸಿನಲ್ಲಿ ದಾಂಧಲೆ ನಡೆಸುತ್ತಿದ್ದ ಆನೆಗಳು, ಇತ್ತೀಚೆಗೆ ಅಲ್ಲಿಂದ 10 ಕಿ.ಮೀ ದೂರವಿರುವ ಹೊಸನಗರ, ಅಕ್ಕಲವಾಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಬರಲು ಪ್ರಾರಂಭಿಸಿವೆ. ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಜನರಲ್ಲಿ ಆನೆಗಳ ಭಯ ಕಾಡುತ್ತಿದೆ. ರಾತ್ರಿ ವೇಳೆ ಜಮೀನಿಗೆ ನೀರುಣಿಸಲು ಅಥವಾ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಅನೇಕ ದಿನಗಳಿಂದ ಆನೆಗಳ ಹಾವಳಿ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಬೆಳೆಗಳು ಉಳಿಯುತ್ತಿಲ್ಲ. ಈ ಕುರಿತು ಶಾಸಕರ ಗಮನಕ್ಕೂ ತಂದಿದ್ದೇವೆ.ಉಮೇಶ್ ತರಿಗಳಲೆ ಗ್ರಾಮದ ರೈತ
ನಾನು ಸಚಿವನಾಗಿದ್ದಾಗ ಈ ಭಾಗದ ಕಾಡಿನಂಚಿಗೆ ಟ್ರಂಚ್ ಸೌರ ವಿದ್ಯುತ್ ತಂತಿಯ ಬೇಲಿ ಮಾಡಿಸಿ ಆನೆಗಳ ಹಾವಳಿ ನಿಯಂತ್ರಿಸಲಾಗಿತ್ತು. ಶಾಶ್ವತ ಪರಿಹಾರದ ಕುರಿತು ಈಗಾಗಲೇ ಚರ್ಚಿಸಿದ್ದು ಕ್ರಮ ಕೈಗೊಳ್ಳಲಾಗುವುದು.ಎ.ಮಂಜು ಶಾಸಕ
ಹಿಂದೆ ಅಳವಡಿಸಿದ್ದ ಸೌರ ವಿದ್ಯುತ್ ತಂತಿ ಕಿತ್ತು ಹೋಗಿದ್ದು ಆನೆಗಳು ಸುಲಭವಾಗಿ ಕಾಡಿನಿಂದ ಹೊರಗೆ ಬರುತ್ತಿವೆ. ಹೊಸದಾಗಿ ಸೌರ ವಿದ್ಯುತ್ ಬೇಲಿ ಅಳವಡಿಸಲು ಟೆಂಡರ್ ಕರೆದಿದ್ದು ಕೆಲವೇ ದಿನಗಳಲ್ಲಿ ಬೇಲಿ ಅಳವಡಿಸಲಾಗುವುದು.ಯಶ್ಮಾ ಮಾಚಮ್ಮ ವಲಯ ಅರಣ್ಯಾಧಿಕಾರಿ ಅರಕಲಗೂಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.