ADVERTISEMENT

ಬೀಡು ಬಿಟ್ಟಿರುವ ಕಾಡಾನೆ ಹಿಂಡು: ನೆಲಕಚ್ಚುತ್ತಿದೆ ಕಾಫಿ ತೋಟ, ಭತ್ತದ ಗದ್ದೆ

ಎಂ.ಪಿ.ಹರೀಶ್
Published 5 ಡಿಸೆಂಬರ್ 2023, 6:33 IST
Last Updated 5 ಡಿಸೆಂಬರ್ 2023, 6:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಆಲೂರು: ಇತ್ತೀಚೆಗೆ ತಾಲ್ಲೂಕಿನ ಗಡಿ ಭಾಗದಲ್ಲಿರುವ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಗುಂಪುಗೂಡಿ ತಿರುಗಾಡುತ್ತಿದ್ದು, ಕೊಯ್ಲಿಗೆ ಬಂದಿರುವ ಕಾಫಿ, ಭತ್ತಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗುತ್ತಿದೆ. ಹವಾಮಾನ ವೈಪರೀತ್ಯದಲ್ಲೂ ಕಷ್ಟಪಟ್ಟು ಬೆಳೆದ ಬೆಳೆ ಪಡೆಯುವ ಮುನ್ನವೇ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಆಲೂರು ಗಡಿ ಪ್ರದೇಶ ಬಿಕ್ಕೋಡು ಹೋಬಳಿಯ ರೈತರು ಬಹುತೇಕ ಕಾಫಿ ತೋಟಗಳು ಮತ್ತು ಗದ್ದೆಗಳನ್ನು ಅವಲಂಬಿಸಿದ್ದಾರೆ. ಸರಿಯಾಗಿ ಮಳೆಯಾಗದೇ ಅಲ್ಪಸ್ವಲ್ಪ ಕಾಫಿ ಹಣ್ಣಾಗಿದ್ದು, ಕೊಯ್ಲು ಮಾಡಲಾಗುತ್ತಿದೆ. ಭತ್ತದ ಗದ್ದೆಗಳು ಕೊಯ್ಲಿಗೆ ಬಂದಿವೆ.

ADVERTISEMENT

ಕಾಡಾನೆಗಳು ಹಿಂಡಾನೆ ಅತ್ತಿಂದಿತ್ತ ತಿರುಗಾಡುತ್ತಿದ್ದು, ಕಾಫಿ ಗಿಡ ಮತ್ತು ಭತ್ತದ ಬೆಳೆ ತುಳಿದು ಸಂಪೂರ್ಣ ನಾಶವಾಗಿದೆ. ಈ ವರ್ಷ ಕಾಡಾನೆಗಳ ಕಾಟ ಅತಿಯಾಗಿರುವುದರಿಂದ ಕಾರ್ಮಿಕರು ತೋಟ, ಗದ್ದೆಗಳಿಗೆ ಕೆಲಸಕ್ಕೆ ಹೋಗಲು ಭಯಭೀತರಾಗಿದ್ದಾರೆ. ಕೆಲವೆಡೆ ಕಾಫಿ ಕೊಯ್ಲು ಮಾಡಲಾಗದೇ ಉದುರುತ್ತಿದೆ. ಒಮ್ಮೆ ಗದ್ದೆಗಳಲ್ಲಿ 30-35 ಆನೆಗಳು ಸಂಚರಿಸುವುದರಿಂದ ಕೊಯ್ಲಿಗೆ ತಯಾರಾಗಿದ್ದ ಭತ್ತ ನೆಲಕಚ್ಚಿದೆ.

ಒಂದು ಕಾಫಿ ಗಿಡ ನೆಟ್ಟು ಪೋಷಿಸಿ ಫಸಲು ಪಡೆಯುವವರೆಗೆ ಆರು ವರ್ಷಗಳ ಕಾಲ ಕಾಪಾಡಬೇಕು. ಇಂತಹ ಕಾಪಾಡಿದ ಗಿಡವನ್ನು ಒಮ್ಮೆಗೆ ಆನೆ ತುಳಿದು ನಾಶ ಮಾಡುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಸುತ್ತಲೂ ಕಾಫಿ ತೋಟಗಳಿರುವುದರಿಂದ ಸುಮಾರು ಒಂದು ತಿಂಗಳಿನಿಂದ ಇಲ್ಲಿಯೇ ಬೀಡು ಬಿಟ್ಟಿವೆ. ನೀರಿನ ದಾಹ ತೀರಿಸಿಕೊಳ್ಳಲು ಕೆಲವೊಮ್ಮೆ ವಾಟೆಹೊಳೆ ಹಿನ್ನೀರಿಗೆ ಬಂದು ನೀರು ಕುಡಿದು ಪುನಃ ಕಾಫಿ ತೋಟಗಳಿಗೆ ತೆರಳುತ್ತಿವೆ.

ಮುಂದಿನ ಒಂದೆರಡು ವರ್ಷ ಕಾಡಾನೆಗಳ ಹಾವಳಿ ಇದೇ ರೀತಿ ಮುಂದುವರಿದರೆ ಜನಸಾಮಾನ್ಯರ ಬದುಕು ಅತಂತ್ರವಾಗಲಿದೆ. ಸಾರ್ವಜನಿಕರು ಜಮೀನಿಗಲ್ಲದೇ, ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ. ಕಾಡಾನೆಗಳ ದಾಳಿಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯ. ಕಾಡಾನೆಗಳು ಮತ್ತು ಮಾನವರು ಸಹ ನಿಶ್ಚಿಂತೆಯಿಂದ ಬದುಕಬೇಕು. ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸರ್ಕಾರ, ಸ್ಥಳೀಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒಕ್ಕೊರಲ ಒತ್ತಾಯ.

ಸದ್ಯದ ಪರಿಸ್ಥಿತಿಯಲ್ಲಿ ಕಾಡು ಪ್ರಾಣಿಗಳು ಮತ್ತು ಮನುಕುಲ ಎರಡೂ ಉಳಿಯಬೇಕು. ಇಡೀ ವರ್ಷ ಬೆಳೆದ ಬೆಳೆ ಕಾಡಾನೆಗಳ ದಾಳಿಗೆ ಸಿಲುಕಿ ಹಾನಿಯಾಗುತ್ತಿದೆ. ಈಗಾಗಲೇ ಕಾಡಾನೆಗಳನ್ನು ಹಿಡಿದು ಕಾಲರ್ ಅಳವಡಿಸಿ ಚಲನವಲನ ಗಮನಿಸಲಾಗುತ್ತಿದೆ. ಕಾಡಾನೆಗಳ ಸಂಚಲನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಜನಸಾಮಾನ್ಯರು ಜಾಗೃತರಾಗಿರಬೇಕು ಎಂದು ಆಲೂರು ವಲಯ ಅರಣ್ಯಾಧಿಕಾರಿ ಯತೀಶ್‌ ಹೇಳುತ್ತಾರೆ.

‘ಪರಿಹಾರ ಸಂಬಳಕ್ಕೂ ಸಾಲಲ್ಲ’

ಕಾಡಾನೆಗಳ ಹಾವಳಿಗೆ ಭಯಭೀತರಾಗಿರುವ ಕಾರ್ಮಿಕರು, ಕಾಫಿ ಹಣ್ಣನ್ನು ಕೊಯ್ಲು ಮಾಡಲು ಬರುತ್ತಿಲ್ಲ. ಗದ್ದೆಯಲ್ಲಿ ಭತ್ತ ಉದುರುತ್ತಿದೆ. ಒಮ್ಮೆ 30-35 ಕಾಡಾನೆಗಳ ಗುಂಪು ತೋಟ, ಗದ್ದೆಗಳಲ್ಲಿ ಹಾದು ಹೋದರೆ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗುತ್ತಿದೆ ಎನ್ನುತ್ತಾರೆ ಹೊಳಲು ಎಸ್ಟೇಟ್‌ ಕಾಫಿ ಬೆಳೆಗಾರ ಎಚ್.ಎ. ಯೋಗೇಶ್.

ಸರ್ಕಾರ ಕೊಡುವ ಪರಿಹಾರದ ಹಣ ಕಾರ್ಮಿಕರ ದಿನದ ಸಂಬಳಕ್ಕೂ ಸಾಲದು. ಹೀಗಿರುವಾಗ ಸರ್ಕಾರ, ರೈತರು ಮತ್ತು ಕಾಡು ಪ್ರಾಣಿಗಳು ಶಾಶ್ವತವಾಗಿ ಬದುಕಲು ಏನಾದರೂ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.