ADVERTISEMENT

ಶ್ರವಣಬೆಳಗೊಳ: ಮನಸೂರೆಗೊಂಡ ಭರತ ಬಾಹುಬಲಿ ನೃತ್ಯ ರೂಪಕ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 14:13 IST
Last Updated 16 ಫೆಬ್ರುವರಿ 2025, 14:13 IST
ಶ್ರವಣಬೆಳಗೊಳದ ಜೈನಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಭರತ ಬಾಹುಬಲಿಯ ನೃತ್ಯ ರೂಪಕವನ್ನು ಹಾಸನದ ಅಂಬಳೆ ರಾಜೇಶ್ವರಿ ಶಿಷ್ಯ ತಂಡದವರು ಪ್ರದರ್ಶಿಸಿ ಗಮನ ಸೆಳೆದರು.
ಶ್ರವಣಬೆಳಗೊಳದ ಜೈನಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಭರತ ಬಾಹುಬಲಿಯ ನೃತ್ಯ ರೂಪಕವನ್ನು ಹಾಸನದ ಅಂಬಳೆ ರಾಜೇಶ್ವರಿ ಶಿಷ್ಯ ತಂಡದವರು ಪ್ರದರ್ಶಿಸಿ ಗಮನ ಸೆಳೆದರು.   

ಶ್ರವಣಬೆಳಗೊಳ: ಇಲ್ಲಿಯ ಜೈನಮಠದ ಮುಂಭಾಗದಲ್ಲಿ ಸಿದ್ಧಗೊಂಡಿದ್ದ ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ವಿದುಷಿ ಹಾಸನದ ಅಂಬಳೆ ರಾಜೇಶ್ವರಿ ಶಿಷ್ಯ ತಂಡದಿಂದ ಬಾಹುಬಲಿ ಮಸ್ತಕಾಭಿಷೇಕದ ಪ್ರಯುಕ್ತ ಭರತ ಬಾಹುಬಲಿ ನೃತ್ಯ ರೂಪಕ ನಾಟಕ ಪ್ರದರ್ಶಿಸಲಾಯಿತು.

ಶುಕ್ರವಾರ ರಾತ್ರಿ 3 ಗಂಟೆಗೂ ಹೆಚ್ಚು ಕಾಲ ನಡೆದ ಸುಂದರ ನೃತ್ಯರೂಪಕದಲ್ಲಿ 54 ಕಲಾವಿದರು ಭಾಗವಹಿಸಿದ್ದರು. ಭರತ ಬಾಹುಬಲಿ ಪಾತ್ರದಲ್ಲಿ ಪುರುಷರು, ಚಕ್ರರತ್ನ ಹಿಡಿದ ಪುಟ್ಟ ಬಾಲಕ ಹೊರತುಪಡಿಸಿದರೆ, ಇನ್ನುಳಿದ ಎಲ್ಲ ಪಾತ್ರಧಾರಿಗಳು ಬಾಲಕಿಯರೇ. ಕೆಲ ಮಹಿಳೆಯರು ಲವಲವಿಕೆಯಿಂದ ಅಭಿನಯಿಸಿ ಮೆರುಗು ತಂದರು.

‘ಬಾಹುಬಲಿ ಸ್ವಾಮಿ ಜಗಕ್ಕೆಲ್ಲಾ ಸ್ವಾಮಿ’ ಎಂಬ ಹಾಡಿನ ಸುಂದರ ನೃತ್ಯ ಮಾಡಿ, ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಗಮನ ಸೆಳೆದರು. ನೃತ್ಯ ರೂಪಕದಲ್ಲಿ ಭರತ ಬಾಹುಬಲಿಯ ಜನನ, ಅವರ ವಿದ್ಯಾಭ್ಯಾಸ. ರಾಜ್ಯಾಭಿಷೇಕ, ಭರತನ ಶಸ್ತ್ರಾಗಾರದಲ್ಲಿ ಉದಯಿಸಿದ ಚಕ್ರರತ್ನ, ಭರತನ ದಿಗ್ವಿಜಯ, ಭರತ ಬಾಹುಬಲಿ ಧರ್ಮ ಯುದ್ಧಗಳಾದ ದೃಷ್ಟಿ, ಜಲ, ಮಲ್ಲಯುದ್ಧ, ಬಾಹುಬಲಿಯ ವೈರಾಗ್ಯ, ಅವರ ಮೋಕ್ಷ ಪದವಿಯನ್ನು ಹೊಂದುವ ದೃಶ್ಯಗಳನ್ನು ಸುಂದರವಾಗಿ ನಿರೂಪಿಸಿದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪ್ರೇಕ್ಷಕರು 3 ಗಂಟೆಗಳ ಕಾಲ ಮಂತ್ರಮುಗ್ಧರಾಗಿ ನೃತ್ಯ ರೂಪಕ ವೀಕ್ಷಿಸಿದರು.

ADVERTISEMENT

ಆಶೀರ್ವಚನ ನೀಡಿದ ಅಭಿನವ ಚಾರುಕೀರ್ತಿ ಶ್ರೀಗಳು, ಭರತ ಬಾಹುಬಲಿಯ ನೃತ್ಯ ರೂಪಕವು ಕಡಿಮೆ ಅವಧಿಯಲ್ಲಿ ಅತ್ಯದ್ಬುತವಾಗಿ ಪ್ರದರ್ಶಿತವಾಗಿದೆ. ಎಲ್ಲ ಪಾತ್ರಗಳಿಗೂ ಜೀವ ತುಂಬಿದ್ದು, ಸಂತಸವಾಗಿದೆ ಎಂದು ಶ್ಲಾಘಿಸಿದರು.

ಈ ನೃತ್ಯ ರೂಪಕದ ನಿರ್ದೇಶಕಿ ಅಂಬಳೆ ರಾಜೇಶ್ವರಿ ಮತ್ತು ಕಲಾವಿದರ ತಂಡವನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಶ್ರವಣಬೆಳಗೊಳದ ಜೈನಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಭರತ ಬಾಹುಬಲಿಯ ನೃತ್ಯ ರೂಪಕವನ್ನು ಹಾಸನದ ಅಂಬಳೆ ರಾಜೇಶ್ವರಿ ಶಿಷ್ಯ ತಂಡದವರು ಪ್ರದರ್ಶಿಸಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.