ಹಾಸನ: ಮುಂದಿನ ಪೀಳಿಗೆ ಆರೋಗ್ಯವಾಗಿರಲು ಪರಿಸರದ ಅತ್ಯವಶ್ಯಕವಾಗಿದ್ದು, ಪರಿಸರ ರಕ್ಷಣೆ ಮಾಡುವ ಜೊತೆಗೆ ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳೆಸಬೇಕಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು.
ಇಲ್ಲಿನ ವಿಜಯನಗರದ ಟೈಮ್ಸ್ ಅಂತರ ರಾಷ್ಟ್ರೀಯ ಶಾಲೆಯಲ್ಲಿ ಶನಿವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್, ಬಟ್ಟೆ ಅಂಗಡಿ, ಅಕ್ಷರ ಅಕಾಡೆಮಿ, ಅಕ್ಷರ ಬುಕ್ ಹೌಸ್ ವತಿಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ 10 ಸಾವಿರ ಸಸಿ ವಿತರಣೆ ಮಾಡುವ ಟೈಮ್ಸ್ ಹಸಿರ ಸಿರಿ ಸಸ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಭೂ ಮಂಡಲದೊಳಗೆ ಜೀವಿಸುವ ಪ್ರತಿಯೊಂದು ಜೀವಿಗೂ ಪರಿಸರದ ಅವಶ್ಯಕವಾಗಿದ್ದು, ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕಿದೆ. ವಿವಿಧ ಉದ್ದೇಶಕ್ಕಾಗಿ ನಾವು ಪರಿಸರದ ವ್ಯಾಪ್ತಿ ಕಡಿಮೆ ಮಾಡುತ್ತಿದ್ದೇವೆ, ಆದರೆ ಪರಿಸರ ಒಮ್ಮೆ ಮುನಿಸಿಕೊಂಡರೆ ನಾವೂ ಇಲ್ಲವಾಗುತ್ತೇವೆ. ನಮ್ಮ ಉತ್ತಮ ಆರೋಗ್ಯ ಹಾಗೂ ಮುಂದಿನ ಪೀಳಿಗಾಗಿ ಪರಿಸರವನ್ನು ಸಂರಕ್ಷಿಸಿ ಉಳಿಸಬೇಕಾಗಿದೆ ಎಂದರು.
ಪ್ರತಿಯೊಂದು ಮಗು ತಮ್ಮ ಹಿರಿಯರ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟು ಮರವಾಗುವಂತೆ ನೋಡಿಕೊಳ್ಳಬೇಕು. ಗಿಡಗಳನ್ನು ಕಡಿಯುವ ಮನುಷ್ಯರು ಅವುಗಳನ್ನು ಪುನಃ ಬೆಳೆಸುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಚಿಕ್ಕ ಮಕ್ಕಳಿಗೆ ಆರಂಭದಿಂದಲೇ ಪರಿಸರದ ಬಗ್ಗೆ, ಗಿಡ ಮರಗಳನ್ನು ಬೆಳೆಸುವುದರ ಬಗೆಗೆ ಅರಿವು ಮೂಡಿಸುವ ಕಾರ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಸರವನ್ನು ಉಳಿಸುವ ಕೆಲಸ ಮಾಡಬಹುದು ಎಂದು ಹೇಳಿದರು.
ಗಂಗಾಧರ್ ಅವರು ಪ್ರತಿ ವರ್ಷ 10 ಸಾವಿರ ಸಸಿಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಮಕ್ಕಳು ಹಾಗೂ ಪೋಷಕರು ಈ ಕಾಳಜಿ ಅರ್ಥ ಮಾಡಿಕೊಂಡು ಸಸಿಗಳನ್ನು ಮರಗಳಾಗಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ಬಿ.ಕೆ. ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ 10ಸಾವಿರ ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಈ ವರ್ಷದಿಂದ ನಾವು ನೀಡಿದ ಸಸಿಗಳು ಎಷ್ಟರ ಮಟ್ಟಿಗೆ ಪೋಷಣೆ ಮಾಡಲಾಗುತ್ತಿದೆ ಎಂದು ಶಾಲಾ ಹಂತದಲ್ಲಿ ಶಿಕ್ಷಕರು ಪರಿಶೀಲಿಸಲಿದ್ದು, ಮಕ್ಕಳನ್ನು ಅಭಿನಂದಿಸುವ ಕೆಲಸ ಮಾಡಲಾಗುವುದು ಎಂದರು.
ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಸಿ ವಿತರಿಸಲಾಯಿತು. ರೋಟರಿ ವಲಯ 9ರ ಸಹಾಯಕ ಗವರ್ನರ್ ಮಂಜುನಾಥ್, ವಲಯ ಸೇನಾನಿ ಮಮತಾ ಪಾಟೀಲ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್‍ನ ಕಾರ್ಯದರ್ಶಿ ರವಿಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ., ಮಾಜಿ ಅಧ್ಯಕ್ಷ ಸಚ್ಚಿನ್, ಮಾಜಿ ಕಾರ್ಯದರ್ಶಿ ಪುನೀತ್, ಸದಸ್ಯರಾದ ಯೋಗೇಶ್ ಎಸ್., ಡಾ. ವಿಕ್ರಂ ಬಿ., ಡಾ. ಎಂ.ಡಿ. ನಿತ್ಯಾನಂದ, ಪ್ರಸಾದ್, ಗಿರೀಶ್, ಅನಿಲ್ ರೈ, ನವೀನ್, ಚಂದನ್, ಟೈಮ್ಸ್ ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಾಮ್, ಅರ್ಜುನ್, ಸುಮನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.