ADVERTISEMENT

ಐದು ಹೆಚ್ಚುವರಿ ಖರೀದಿ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ಆರ್. ಗಿರೀಶ್

ಭತ್ತ 2 ಲಕ್ಷ ‌, ರಾಗಿ 75 ಸಾವಿರ ಮೆಟ್ರಿಕ್‌ ಟನ್‌ ಖರೀದಿ ಗುರಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 13:40 IST
Last Updated 2 ಮಾರ್ಚ್ 2021, 13:40 IST
ಆರ್‌. ಗಿರೀಶ್‌
ಆರ್‌. ಗಿರೀಶ್‌   

ಹಾಸನ: ಕನಿಷ್ಟ ಬೆಂಬಲ ಬೆಲೆಯಡಿ 7 ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ರೈತರಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 5 ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಜಿಲ್ಲೆಯಲ್ಲಿ 9 ಭತ್ತ , 14 ರಾಗಿ ಸೇರಿ ಒಟ್ಟು 23 ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೆಂಬಲ ಬೆಲೆಯೊಂದಿಗೆ ರಾಗಿ, ಭತ್ತ ಖರೀದಿಗೆ ಮಾರ್ಚ್ ತಿಂಗಳ ಅಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ. ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ ₹ 1,868, ರಾಗಿ ಕ್ವಿಂಟಲ್‍ಗೆ ₹3,295 ಖರೀದಿ ದರ ನಿಗದಿಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭತ್ತ 2 ಲಕ್ಷ ಮೆಟ್ರಿಕ್‌ ಟನ್‌ ಹಾಗೂ ರಾಗಿ 75 ಸಾವಿರ ಮೆಟ್ರಿಕ್‌ ಟನ್‌ ಖರೀದಿ ಗುರಿ ಹೊಂದಲಾಗಿದ್ದು, 9 ಭತ್ತ ಖರೀದಿ ಹಾಗೂ 14 ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಮಾರ್ಚ್‌ 1ರ ವರೆಗೆ 1,404 ರೈತರಿಂದ 47,038 ಕ್ವಿಂಟಲ್ ಭತ್ತ ಹಾಗೂ 15,248 ರೈತರಿಂದ 3,46,109 ಕ್ವಿಂಟಲ್‌ ರಾಗಿ ಖರೀದಿಸಲಾಗಿದೆ ಎಂದು ಹೇಳಿದರು.

ADVERTISEMENT

ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ, ಶ್ರವಣಬೆಳಗೊಳ ಎಪಿಎಂಸಿ ಪ್ರಾಂಗಣ, ಹೊಳೆನರಸೀಪುರ ತಾಲ್ಲೂಕು ದೊಡ್ಡಹಳ್ಳಿ ಎಪಿಎಂಸಿ ಪ್ರಾಂಗಣ, ಆಲೂರು ಎಪಿಎಂಸಿ ಪ್ರಾಂಗಣದಲ್ಲಿ ಭತ್ತ ಮತ್ತು ರಾಗಿ ಖರೀದಿ ಮಾಡಿದರೆ ಮೊಸಳೆಹೊಸಳ್ಳಿಯ ಚೆನ್ನಾಂಬಿಕ ತೋಟಗಾರಿಕ ರೈತ ಉತ್ಪಾದಕರ ಕಂಪನಿಯಲ್ಲಿ ರಾಗಿ ಮಾತ್ರ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದರು.

ಖರೀದಿ ಕೇಂದ್ರದಲ್ಲಿಯೇ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ರೈತರು ಯಾರಿಗೂ ಹಣ ಕೊಡುವ ಅಗತ್ಯ ಇಲ್ಲ. ಕೇಂದ್ರಗಳಿಗೆ ತಹಶೀಲ್ದಾರ್‌ಗಳು ಭೇಟಿ ನೀಡುವಂತೆ ಸೂಚನೆ ನೀಡಿದ್ದು, ಲೋಡಿಂಗ್‌ ಆನ್‌ ಲೋಡಿಂಗ್‌ಗೂ ಹಣ ನೀಡುವಂತಿಲ್ಲ. ಆ ರೀತಿ ಹಣ ಪಡೆದರೆ ದೂರು ನೀಡಬಹುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ ಸತೀಶ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.