ADVERTISEMENT

ಎಲ್ಲರಿಗೂ ಕಾನೂನಿನ ನೆರವು ಅಗತ್ಯ: ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಅಭಿಮತ

ಕಾನೂನು ಅರಿವು ಸಮಾರೋಪ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 7:06 IST
Last Updated 15 ನವೆಂಬರ್ 2021, 7:06 IST
ಹಾಸನದಲ್ಲಿ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಉದ್ಘಾಟಿಸಿದರು. ಜಿ.ಪಂ ಸಿಇಒ ಬಿ.ಎ. ಪರಮೇಶ್, ಎಡಿಸಿ ಕವಿತಾ ರಾಜಾರಾಂ, ಎಎಸ್ಪಿ ಬಿ.ಎನ್. ನಂದಿನಿ ಇದ್ದರು
ಹಾಸನದಲ್ಲಿ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಉದ್ಘಾಟಿಸಿದರು. ಜಿ.ಪಂ ಸಿಇಒ ಬಿ.ಎ. ಪರಮೇಶ್, ಎಡಿಸಿ ಕವಿತಾ ರಾಜಾರಾಂ, ಎಎಸ್ಪಿ ಬಿ.ಎನ್. ನಂದಿನಿ ಇದ್ದರು   

ಹಾಸನ: ‘ಮಾನವನಿಗೆ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ನೆರವು ಅಗತ್ಯವಿದೆ. ಹಾಗಾಗಿ ಎಲ್ಲರೂ ಸಂವಿಧಾನದ ಆಶಯಗಳನ್ನು ಅರಿತು ಅನುಸರಿಸಬೇಕು’ ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಹಾಸನಾಂಬ ಕಲಾಭವನದಲ್ಲಿ ಏರ್ಪಡಿಸಿದ್ದ ಸರ್ಕಾರದ ವಿವಿಧ ಯೋಜನೆಗಳ ಕುರಿತ ವಸ್ತು ಪ್ರದರ್ಶನ ಹಾಗೂ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅ. 2ರಿಂದ ಈವರೆಗೆ 5,760 ಕಾರ್ಯಕ್ರಮ ಮಾಡಲಾಗಿದೆ. 261 ಗ್ರಾಮ ಪಂಚಾಯಿತಿಗಳ 2,526 ಗ್ರಾಮಗಳಲ್ಲಿಯೂ ಕಾನೂನಿನ ಜಾಗೃತಿ ಸಭೆಗಳು ನಡೆದಿವೆ. 473 ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಕಾನೂನಿನ ಜಾಗೃತಿ ಮೂಡಿಸಲಾಗಿದೆ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಮಾತನಾಡಿ, ಶಾಲಾ ಹಂತದಲ್ಲಿಯೇ ಕಾನೂನಿನ ಅರಿವು ಹೊಂದಿರುವುದು ಅಗತ್ಯ. ದೇಶದ ನೆಲದ ನಿಯಮಗಳ ಅರಿವು ಇದ್ದರೆ ಬಹುತೇಕ ಉಲ್ಲಂಘನೆಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಮಾತನಾಡಿ, ‘ಕಾನೂನಿನ ಅರಿವಿನ ಕೊರತೆಯಿಂದ ಅನೇಕ ಅಪರಾಧಗಳು ನಡೆಯುತ್ತಿವೆ. ಆದರೆ, ಇದರಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಿದ್ದಲ್ಲಿ ತಪ್ಪುಗಳಾ ಗುವುದನ್ನು ತಡೆಯಬಹುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ‘ಮಕ್ಕಳು ಮುಗ್ಧತೆ ಕಳೆದುಕೊಳ್ಳದೆ ಸಮಾಜದಲ್ಲಿ ಬೌದ್ಧಿಕವಿಕಾಸ ಹೊಂದುತ್ತಲೇ ಮಾನವೀಯ ಸಂಬಂಧಗಳನ್ನು ಉಳಿಸಿ ಕೊಂಡು ಬೆಳೆಯಬೇಕು’ ಎಂದರು.

ಇದೇ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಬಿ.ಟಿ ಮಾನವ ಮತ್ತು ಗ್ಯಾರಂಟಿ ರಾಮಣ್ಣ ಹಾಗೂ ಮುರಳಿಅವರಿಂದ ಜಾಗೃತಿ ಗೀತೆಗಳ ಗಾಯನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ರವಿಕಾಂತ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಕಾಶ್,ಜಿ.ಪಂ. ಮುಖ್ಯ ಯೋಜನಾಧಿಕಾರಿ ನಾಗರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ.ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.