ADVERTISEMENT

ಸಕಲೇಶಪುರ: ನಕಲಿ ನೋಟು, ನಾಲ್ವರ ಬಂಧನ 

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 13:05 IST
Last Updated 17 ಅಕ್ಟೋಬರ್ 2019, 13:05 IST
   

ಸಕಲೇಶಪುರ: ನಕಲಿ ನೋಟುಗಳನ್ನು ಪ್ರಿಂಟ್‌ ಮಾಡಿ ಚಲಾವಣೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

100, 500 ಹಾಗೂ 2000 ಮುಖಬೆಲೆಯ ಸುಮಾರು 14 ಸಾವಿರ ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೆಲ್ಯಾಡಿ ಸಮೀಪದ ಪೆಡುಬೆಟ್ಟು ಮನೆ ಗ್ರಾಮದ ಇಲಿಯಾಸ್‌, ಹೊಸಮಜಲು ಮನೆ ನಿವಾಸಿ ಸುಲೈಮಾನ್‌, ಕೆ.ಆರ್‌.ನಗರ ತಾಲ್ಲೂಕು ಬೆಟ್ಟಗಾನಹಳ್ಳಿ ನಿವಾಸಿ ಕಿರಣ್‌, ಹೊಳೆನರಸೀಪುರ ತಾಲ್ಲೂಕಿನ ನಗರಹಳ್ಳಿ ಗ್ರಾಮದ ಸಂತೋಷ್‌ ಬಂಧಿತ ಆರೋಪಿಗಳು.

ADVERTISEMENT

ತಾಲ್ಲೂಕಿನ ಮಾರನಹಳ್ಳಿ ಪೊಲೀಸ್‌ ಔಟ್‌ ಪೋಸ್ಟ್‌ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಾಖಲೆ ಪರಿಶೀಲಿಸುತ್ತಿದ್ದ ಪೊಲೀಸರು ಕಾರೊಂದನ್ನು ತಡೆದು ನಿಲ್ಲಿಸಿದ್ದಾರೆ. ಚಾಲನಾ ಪರವನಾಗಿ, ವಾಹನ ದಾಖಲೆಗಳನ್ನು ನೀಡುವಂತೆ ಪೊಲೀಸರು ಕೇಳಿದಾಗ ಕಾರಿನಲ್ಲಿ ಇದ್ದ ಯುವಕರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ಅಲ್ಲದೇ, ಸುಲೈಮಾನ್ ಎಂಬಾತ ಕಾರಿನಿಂದ ಇಳಿದು ಓಡುತ್ತಿದ್ದಾಗ ಪೊಲೀಸರು ಬೆನ್ನಟ್ಟಿ ಅವನನ್ನು ಹಿಡಿದಿದ್ದಾರೆ. ಬಳಿಕ ಅವರನ್ನು ತಪಾಸಣೆ ನಡೆಸಿದಾಗ ಎಲ್ಲರ ಬಳಿಯೂ ನಕಲಿ ನೋಟುಗಳು ಪತ್ತೆಯಾಗಿವೆ.

100 ರೂಪಾಯಿ ಮುಖಬೆಲೆಯ ಒಂದೇ ನಂಬರಿನ 15 ನೋಟುಗಳು, ಒಂದೇ ನಂಬರಿನ 2000 ಮುಖಬೆಲೆಯ 5 ನೋಟುಗಳು ಹಾಗೂ 500 ಮುಖ ಬೆಲೆಯ ನೋಟುಗಳು ಪತ್ತೆಯಾಗಿವೆ. ಅಲ್ಲದೇ, ಮಾರನಹಳ್ಳಿ ಹೊಟೆಲ್‌ ಒಂದರಲ್ಲಿ 2 ಸಾವಿರ ಮುಖಬೆಲೆಯ ನೋಟು ಚಲಾವಣೆ ಮಾಡಿರುವುದಾಗಿ, ಚನ್ನರಾಯಪಟ್ಟಣದಲ್ಲಿ ಅಂತಿಮ ವರ್ಷದ ಡಿಪ್ಲಮೊ ಓದುತ್ತಿರುವ ಕಿರಣ್‌ ತನ್ನ ಬಳಿ ಇರುವ ಕಲರ್‌ ಪ್ರಿಂಟರ್‌ನಿಂದ ನೋಟುಗಳನ್ನು ಸ್ಕ್ಯಾನ್‌ ಮಾಡಿ ಪ್ರಿಂಟ್‌ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ‘ ಎಂದು ಪಿಎಸ್‌ಐ ಬ್ಯಾಟರಾಯಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.