ಹಾಸನ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಎಫ್‌ಸಿ ಮತ್ತು 15ನೇ ಹಣಕಾಸನ್ನು ಪೂರ್ಣಪ್ರಮಾಣದಲ್ಲಿ ವೆಚ್ಚ ಮಾಡುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೆಲಸ ವಿಳಂಬ ಮಾಡಬಾರದು. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಎಚ್ಚರಿಸಿದರು.
ಐತಿಹಾಸಿಕ ಪ್ರವಾಸಿ ಸ್ಥಳ ಬೇಲೂರಿನಲ್ಲಿ ದೇವಾಲಯದ ಸುತ್ತ ಮುತ್ತ ಹಾಗೂ ಪುರಸಭೆ ವ್ಯಾಪ್ತಿಯ ರಸ್ತೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತೆ ಮತ್ತು ಪ್ರತಿವಾರ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡುವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ನಮ್ಮ ಕ್ಲಿನಿಕ್‌ಗೆ ಖರೀದಿಸುವ ವಸ್ತುಗಳ ಬಗ್ಗೆ ನಿರ್ದಿಷ್ಟ ವಿವರಣೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಪತ್ರ ಬರೆಯಿರಿ. ನಗರೋತ್ಥಾನ ಹಂತ 4ಕ್ಕೆ ಸಂಬಂಧಿಸಿ ಒಣ ಮತ್ತು ಹಸಿ ಕಸ ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪ್‌ಗಳು ಹಾದು ಹೋಗದಂತೆ ಎಚ್ಚರವಹಿಸಬೇಕು. ನೀರಿನ ಮಾದರಿ ಪರೀಕ್ಷೆ ನಡೆಸಬೇಕು. ಪ್ಲಾಸ್ಟಿಕ್ ಬಳಕೆ ತಡೆಯಬೇಕು. ಖಸಾಯಿ ಖಾನೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ರಸ್ತೆಗಳ ಗುಂಡಿ ಮುಚ್ಚಿಸಲು ಕಡ್ಡಾಯವಾಗಿ ಕ್ರಮವಹಿಸಬೇಕು. ಸಾರ್ವಜನಿಕರಿಗೆ ಇ-ಖಾತೆ ಮಾಡಿಕೊಡಲು ವಿಳಂಬ ಮಾಡಬೇಡಿ. ಆಸ್ತಿ ಸಂರಕ್ಷಣೆಗೆ, ನಾಯಿಗಳ ಸಂತಾನ ಶಕ್ತಿ ನಿಯಂತ್ರಣಕ್ಕೆ, ಆಹಾರ ಸುರಕ್ಷತೆಗೆ ಎಚ್ಚರ ವಹಿಸುವಂತೆ ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತ್ಯಾಗರಾಜ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.