ADVERTISEMENT

ಸಾಲಮನ್ನಾ ಯೋಜನೆಯಲ್ಲಿ ರೈತರಿಗೆ ವಂಚನೆ: ಐವರು ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 13:24 IST
Last Updated 15 ಜುಲೈ 2019, 13:24 IST
ಸೋಮನಹಳ್ಳಿ ನಾಗರಾಜ್‌
ಸೋಮನಹಳ್ಳಿ ನಾಗರಾಜ್‌   

ಹಾಸನ: ಬೆಳೆ ಸಾಲಮನ್ನಾ ಯೋಜನೆಯಲ್ಲಿ ಸಹಕಾರಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ವಂಚನೆ ಮಾಡಿರುವುದು ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಜಿಲ್ಲೆಯ ಐದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

‘ಕೆಲ ಸಹಕಾರಿ ಬ್ಯಾಂಕ್ ಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಸಾಲ ಮನ್ನಾ ಹಣದಲ್ಲಿ ₹ 10 ರಿಂದ 25 ಸಾವಿರ ವರೆಗೆ ವಂಚನೆ ಮಾಡಲಾಗಿದೆ. ಅಂದಾಜು ₹ 16 ಲಕ್ಷ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಹಾಗಾಗಿ ಚನ್ನರಾಯಪಟ್ಟಣ ತಾಲ್ಲೂಕಿನ ಗೌಡಗೆರೆ, ಮತಿಘಟ್ಟ, ಹಾಸನ ತಾಲ್ಲೂಕಿನ ಹಳೆಕೊಪ್ಪಲು, ಹಿರಕಡ್ಲೂರು, ಕೋರವಂಗಲ ಪ್ರಾಥಮಿಕ ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಧಿಕಾರಿಗಳಿಂದ ಹಣ ವಸೂಲು ಮಾಡಿ ರೈತರಿಗೆ ವಾಪಸ್‌ ಕೊಡಿಸಲಾಗಿದೆ’ ಎಂದು ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌ ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಸ್ಪಷ್ಪಡಿಸಿದರು.

ಜಿಲ್ಲೆಯಲ್ಲಿ ಒಟ್ಟು 1,19,814 ರೈತರ ಸುಮಾರು ₹ 502 ಕೋಟಿ ಸಾಲಮನ್ನಾ ಆಗಿದೆ. ಈ ಪೈಕಿ 91,455 ರೈತರ ₹ 357 ಕೋಟಿ ಸಾಲಮನ್ನಾ ಹಣ ಸರ್ಕಾರದಿಂದ ಬಿಡುಗಡೆಯಾಗಿದ್ದು, ಇನ್ನೂ 24,555 ರೈತರ ₹ 119 ಕೋಟಿ ಹಣ ಬರಬೇಕಿದೆ. ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರಿಗೆ ಸಾಲಮನ್ನಾ ಸೌಲಭ್ಯ ದೊರಕುವುದಿಲ್ಲ. ಹಾಗಾಗಿ ₹ 502 ಕೋಟಿ ಮೊತ್ತದ ಪೈಕಿ ₹ 26 ಕೋಟಿ ಸರ್ಕಾರ ಕಡಿತ ಮಾಡಿದೆ ಎಂದು ಹೇಳಿದರು.

‘ರೈತರ ದೂರಿನ ಮೇರೆಗೆಸಹಕಾರ ಸಂಘಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ್ದು, ಬೆಳೆ ಸಾಲಮನ್ನಾ ಯೋಜನೆಯಡಿ ಜಮಾ ಆದ ಹಣವನ್ನು ರೈತರಿಗೆ ವಿತರಣೆ ಮಾಡುವಾಗ ಅಧಿಕಾರಿಗಳು ಸಾವಿರಾರು ರೂಪಾಯಿ ಕಡಿತ ಮಾಡಿರುವುದು ಬೆಳಕಿಗೆ ಬಂದಿದೆ.ಹಾಗಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು’ ಎಂದರು.

ADVERTISEMENT

ಅಲ್ಲದೇ, ’ಇದರಲ್ಲಿ ಸಂಘದ ಆಡಳಿತ ಮಂಡಳಿ ತಪ್ಪಸೆಗಿದ್ದರೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಮೊಬೈಲ್‌ ಎಟಿಎಂನಲ್ಲಿ ಹಣ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಎಟಿಎಂ ಬಳಕೆ ಮಾಡಲು ಗೊತ್ತಿಲ್ಲದ ರೈತರಿಗೆ ನೇರವಾಗಿ ಬ್ಯಾಂಕ್ ಮೂಲಕವೇ ಸಾಲ ಹಣ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲಾದಾದ್ಯಂತ ಸರ್ಕಾರದ ನಿಯಮಾವಳಿ ಪ್ರಕಾರವೇ ಸಾಲ ಹಣ ವಿತರಣೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 1 ಲಕ್ಷ ಪಾಸ್‌ಬುಕ್‌ ವಿತರಣೆಗೆ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

‘ಸಾಲಮನ್ನಾ ದುರುಪಯೋಗ ಅನುಮಾನ ಹಿನ್ನಲೆಯಲ್ಲಿ ಸರ್ಕಾರದ ಮಟ್ಟದಲ್ಲೂ ಸಭೆ ನಡೆದಿದೆ. ಸಾಲಮನ್ನಾ ಫಲಾನುಭವಿಗಳಿಗೆ ಎಟಿಎಂ ಕಾರ್ಡ್‌ ಕಡ್ಡಾಯವಾಗಿ ವಿತರಿಸಬೇಕು. ಅದನ್ನು ಆಕ್ಟಿವೇಟ್ ಮಾಡಬೇಕು. ರೈತರ ಖಾತೆಗೆ ನೇರವಾಗಿ ಸಾಲಮನ್ನಾ ಹಣ ಜಮಾ ಮಾಡಬೇಕು. ಸಾಲಮನ್ನಾ ಹಣ ಬಟವಾಡೆ ಮಾಡಿದ ನಂತರ ವೋಚರ್ ಗೆ ಸಹಿ ಮಾಡಿಸಿಕೊಳ್ಳಬೇಕು. ಮುಖ್ಯವಾಗಿ ಶಾಲಾ, ಕಾಲೇಜು, ಸಹಕಾರಿ ಬ್ಯಾಂಕ್ ಮೊದಲಾದ ಕಡೆ ಸಾಲ ಮನ್ನಾದ ಸೂಚನಾ ಪತ್ರ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಯಮಾವಳಿ ಉಲ್ಲಂಘನೆ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ಸಹ ನೀಡಿದರು.

ಗೋಷ್ಠಿಯಲ್ಲಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ದಯಾನಂದ್‌, ನಿರ್ದೇಶಕರಾದ ಜಯರಾಂ, ಸತೀಶ್‌, ಗಿರೀಶ್‌, ಲೋಕೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.