ADVERTISEMENT

₹ 10 ಸಾವಿರ ಕೋಟಿ ಬಿಡುಗಡೆ ಆಗ್ರಹ: ಎಚ್‌.ಕೆ.ಕುಮಾರಸ್ವಾಮಿ

ನೆರೆ ಪರಿಹಾರಕ್ಕೆ ಆಗ್ರಹಿಸಿ 10ರಂದು ಬೆಂಗಳೂರಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 15:21 IST
Last Updated 5 ಅಕ್ಟೋಬರ್ 2019, 15:21 IST
ಎಚ್‌.ಕೆ.ಕುಮಾರಸ್ವಾಮಿ
ಎಚ್‌.ಕೆ.ಕುಮಾರಸ್ವಾಮಿ   

ಹಾಸನ: ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಸಂತ್ರಸ್ತರಿಗೆ ನೀಡಿರುವ ₹ 1200 ಕೋಟಿ ನೆರವು ಯಾವುದಕ್ಕೂ ಸಾಲದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಪ್ರವಾಹದಿಂದ ₹ 38 ಸಾವಿರ ಕೋಟಿ ನಷ್ಟವಾಗಿದೆ. ಕನಿಷ್ಠ ₹ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಹಾಗೂ ರಾಜ್ಯ ನೈಸರ್ಗಿ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌ ) ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಸಕ್ತ ಮುಂಗಾರಿನಲ್ಲಿ 13 ರಾಜ್ಯಗಳು ಪ್ರವಾಹದಿಂದ ತತ್ತರಿಸಿ, ಸಾವಿರಾರು ಕೋಟಿ ನಷ್ಟವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕಾಗಿ ಶಾಸಕರ ಅನುದಾನ ವನ್ನು ಕೂಡ ತಡೆ ಹಿಡಿಯಲಾಗಿದೆ. ಸಕಲೇಶಪುರ–ಆಲೂರು ಕ್ಷೇತ್ರದಿಂದ ₹ 100 ಕೋಟಿ ಅನುದಾನ ವಾಪಸ್ ಪಡೆಯಲಾಗಿದೆ ಎಂದು ಕಿಡಿಕಾರಿದರು.

ADVERTISEMENT

ಈ ಎಲ್ಲಾ ಲೋಪಗಳನ್ನು ಖಂಡಿಸಿ ಮತ್ತು ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅ.10 ರಂದು ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೋದಿ ಅವರು ಅಮೆರಿಕಕ್ಕೆ ವಾರಗಟ್ಟಲೆ ಪ್ರವಾಸ ಮಾಡುತ್ತಾರೆ. ಆದರೆ, ಕರ್ನಾಟಕಕ್ಕೆ ಒಂದು ಸಾರಿಯೂ ಭೇಟಿ ನೀಡಲು ಸಮಯವಿಲ್ಲ. ಪ್ರಧಾನಿ ಭಾಷಣದಲ್ಲಿ ಬಯಲು ಶೌಚ ಮುಕ್ತ ಭಾರತ ಎಂದಿದ್ದಾರೆ. ಎಲ್ಲಿ ಮುಕ್ತವಾಗಿದೆ ಎಂಬುದನ್ನು ತೋರಿಸಬೇಕು. ಇಲ್ಲವಾದಲ್ಲಿ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಆನೆ ಕಾರಿಡಾರ್‌ ನಿರ್ಮಾಣಕ್ಕೆ ಒತ್ತು ನೀಡಬೇಕು. ಆನೆ ದಾಳಿ ಯಿಂದ ಮೃತಪಟ್ಟ ಕುಟುಂಬಕ್ಕೆ ₹10 ಲಕ್ಷ ನೀಡಬೇಕು ಹಾಗೂ ಹಾಸನ- ಸಕಲೇಶಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಜೆಡಿಎಸ್ ಮುಖಂಡರಾದ ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ನಾಗರಾಜು, ಎಸ್.ದ್ಯಾವೇಗೌಡ, ಜಯರಾಂ, ಅಮೀರ್‍ಜಾನ್
ಹೊಂಗೆರೆ ರಘು ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.