ADVERTISEMENT

ಹಾಸನ: ಫಲಪುಷ್ಪ ಪ್ರದರ್ಶನ ನಾಳೆಯಿಂದ

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 1:57 IST
Last Updated 16 ಅಕ್ಟೋಬರ್ 2025, 1:57 IST
   

ಹಾಸನ: ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹೇಮಾವತಿ ತೋಟಗಾರಿಕೆ ಸಂಘ ಹಾಗೂ ವಿವಿಧ ಅಭಿವೃದ್ಧಿ ಇಲಾಖೆಗಳ ಆಶ್ರಯದಲ್ಲಿ ಫಲಪುಷ್ಪ ಪ್ರದರ್ಶನವನ್ನು ನಗರದ ಸಿಲ್ವರ್ ಜುಬಿಲಿ ಪಾರ್ಕ್‍ನಲ್ಲಿ ಅ.17 ರಿಂದ ಅ.20 ರವರೆಗೆ ಏರ್ಪಡಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 8ಸಾವಿರ ವಿವಿಧ ಬಗೆಯ ಹೂವಿನ ಗಿಡಗಳನ್ನು ಉದ್ಯಾನದ ಪಾತಿಗಳಲ್ಲಿ ಮತ್ತು ವಿವಿಧ ಅಳತೆಯ ಪಾಟ್‌ಗಳಲ್ಲಿ ಬೆಳೆಸಲಾಗಿದ್ದು, ಮರಗಳ ಸುತ್ತ ಹಾಗೂ ಸಮೂಹಗಳಲ್ಲಿ ಆಕರ್ಷಕವಾಗಿ ಜೋಡಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

ಹಳೆಯ, ಉಪಯೋಗಿಸಿದ ಉತ್ಪನ್ನಗಳನ್ನು ಬಳಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸುತ್ತಿದ್ದು, ಜನರಲ್ಲಿ ತ್ಯಾಜ್ಯ ವಸ್ತುಗಳ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರ ಆರ್ಥಿಕತೆಯ ಮೂಲಾಧಾರವಾಗಿದೆ. ಇತ್ತೀಚೆಗೆ ಹಲವು ರೋಗ ಕೀಟ ಬಾಧೆಯಿಂದ ತೆಂಗಿನಲ್ಲಿ ಇಳುವರಿ ಕುಂಠಿಗೊಳ್ಳುತ್ತಿದ್ದು, ರೈತರು ಸಂಕಷ್ಟದಲ್ಲಿರುತ್ತಾರೆ. ತೆಂಗು ಬೆಳೆಯಲ್ಲಿ ರೋಗ, ಕೀಟ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆ ಏರ್ಪಡಿಸಿದ್ದು, ತಾಂತ್ರಿಕ ಮಾಹಿತಿ ಪಡೆಯಬಹುದಾಗಿದೆ ಎಂದರು.

ಫಲಪುಷ್ಪ ಪ್ರದರ್ಶನದ ಅಂಗವಾಗಿ ನಗರದ ಜನತೆಗೆ ಅಲಂಕಾರಿಕ ತೋಟದ ನಿರ್ವಹಣೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅಲಂಕಾರಿಕ ತೋಟ ನಿರ್ವಹಣೆ, ಅನುಪಯುಕ್ತ ವಸ್ತುಗಳನ್ನು ಬಳಸಿ ತೋಟದ ಸೌಂದರ್ಯವನ್ನು ಹೆಚ್ಚಿಸುವ ಸ್ಪರ್ಧೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಶಾಲಾ– ಕಾಲೇಜು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ ₹20 ಗಳನ್ನು ಹಾಗೂ ಮಕ್ಕಳಿಗೆ ₹10 ಗಳ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಖಾಸಗಿ ಅಥವಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಬಂದರೆ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.

ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಸುಜಾತಾ ನಾರಾಯಣ್, ತೋಟಗಾರಿಕೆ ಉಪ ನಿರ್ದೇಶಕ, ಹೇಮಾವತಿ ತೋಟಗಾರಿಕೆ ಸಂಘದ ನಿರ್ದೇಶಕ ಯೋಗೇಶ್ ಎಚ್.ಆರ್., ಹಾಸನ ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಹೇಮಾವತಿ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿ ಭಾನುಪ್ರಕಾಶ್ ಬಿ.ಈ., ಸಹಾಯಕ ತೋಟಗಾರಿಕೆ ನಿರ್ದೇಶಕಿ ಪವಿತ್ರಾ ಜಿ.ಎನ್., ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಸಾರ್ವಜನಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಫಲಪುಷ್ಪ ಪ್ರದರ್ಶನದ ಪ್ರಾರಂಭದಿಂದ ಮುಕ್ತಾಯವಾಗುವವರಗೆ ನಿತ್ಯ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ
ಬಿ.ಆರ್. ಪೂರ್ಣಿಮಾ, ಜಿ.ಪಂ. ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.