ADVERTISEMENT

ಹಾಸನ: ಕಳ್ಳತನ ಮರೆಮಾಚಲು ಸ್ನೇಹಿತನ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 12:36 IST
Last Updated 13 ಜನವರಿ 2025, 12:36 IST
<div class="paragraphs"><p>ಕೊಲೆ</p></div>

ಕೊಲೆ

   

(ಪ್ರಾತಿನಿಧಿಕ ಚಿತ್ರ)

ಹಾಸನ: ತಾವು ಮಾಡಿರುವ ಕಳ್ಳತನ ಕೃತ್ಯಗಳು ಗೊತ್ತಿದ್ದವು ಎಂಬ ಕಾರಣಕ್ಕೆ ತಾಲ್ಲೂಕಿನ ಹರಳಹಳ್ಳಿಯಲ್ಲಿ ಯುವಕನೊಬ್ಬನನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ.

ADVERTISEMENT

ಶಿವಕುಮಾರ್ (34) ಕೊಲೆಯಾದ ಯುವಕ. ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಆರೋಪಿಗಳು.

ಕೊಲೆ ಮಾಡಿದ ನಂತರ ಆರೋಪಿಗಳು ಶವವನ್ನು ಶಿರಾಡಿಘಾಟ್ ರಸ್ತೆಯ ಗುಂಡ್ಯ ಬಳಿಯ ಪ್ರಪಾತಕ್ಕೆ ಬಿಸಾಡಿದ್ದು, ಪೊಲೀಸರು ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಆರೋಪಿಗಳು ಕುರಿ ಹಾಗೂ ಹಸು ಕಳವು ಮಾಡಿದ್ದರು. ಈ ಕೃತ್ಯದ ಬಗ್ಗೆ ಅವರ ಸ್ನೇಹಿತ ಶಿವಕುಮಾರ್‌ಗೆ ಗೊತ್ತಿತ್ತು. ಆತ ಈ ಬಗ್ಗೆ ಯಾರಿಗಾದರೂ ಹೇಳಿದರೆ ತಾವು ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂಬ ಅನುಮಾನದಿಂದ ಆರೋಪಿಗಳು ಈ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಹೈದರಾಬಾದ್‌ನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್‌ನನ್ನು ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಕರೆಸಿಕೊಂಡಿದ್ದ ಶರತ್ ಹಾಗೂ ಪ್ರತಾಪ್, ಶುಕ್ರವಾರ ಮಧ್ಯಾಹ್ನ ಆತನನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದರು. ಆತನಿಗೆ ಕಂಠಪೂರ್ತಿ ಕುಡಿಸಿದ್ದು, ನಿತ್ರಾಣಗೊಂಡ ನಂತರ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಗುಂಡ್ಯ ಬಳಿ ಎಸೆದಿದ್ದರು.

ಈ ಕೃತ್ಯಕ್ಕೆ ದಿಲೀಪ್ ಎಂಬಾತನ ಸಹಾಯ ಪಡೆದಿದ್ದು, ಆತ ನೀಡಿದ ಸುಳಿವು ಆಧರಿಸಿ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ಬಯಲಿಗೆ ಎಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.