ADVERTISEMENT

ಹಾಸನ | ಶುಂಠಿಗೆ ಅಂಗಮಾರಿ- ಬಿಳಿ ಚುಕ್ಕಿ ರೋಗ: ಪರಿಹಾರಕ್ಕೆ ಒತ್ತಾಯ

ತಜ್ಞರ ನೇಮಿಸಿ ರೋಗಪತ್ತೆ ಹಚ್ಚಿ, ಬೆಂಬಲ ಬೆಲೆಯಲ್ಲಿ ಶುಂಠಿ ಖರೀದಿಸಿ– ಬೆಳೆಗಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:36 IST
Last Updated 18 ಜುಲೈ 2025, 4:36 IST
ಹಸಿ ಶುಂಠಿ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ಸದಸ್ಯರು ಹಾಗೂ ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು
ಹಸಿ ಶುಂಠಿ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ಸದಸ್ಯರು ಹಾಗೂ ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು   

ಹಾಸನ: ಜಿಲ್ಲೆಯಲ್ಲಿ ಹಸಿ ಶುಂಠಿ ಬೆಳೆ ಅಂಗಮಾರಿ, ಬಿಳಿ ಚುಕ್ಕಿ ರೋಗಕ್ಕೆ ತುತ್ತಾಗಿದ್ದು, ಸರ್ಕಾರ ಅಗತ್ಯ ಔಷಧಿ ಮತ್ತು ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ಸದಸ್ಯರು ಹಾಗೂ ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಎದುರು ಸಂಘಟಿತರಾದ ವರ್ತಕರು ಹಾಗೂ ಬೆಳೆಗಾರರು ಮೌನ ಜಾಥಾ ನಡೆಸಿ ಎನ್.ಆರ್ ವೃತದಿಂದ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಅಂಗಮಾರಿ ರೋಗಕ್ಕೆ ತುತ್ತಾದ ನಂತರ ಹಸಿ ಶುಂಠಿಯನ್ನು ವಾಣಿಜ್ಯ ಬೆಳೆಯಾಗಿ ಜಿಲ್ಲೆಯ 3-4 ತಾಲ್ಲೂಕುಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಸಿ ಶುಂಠಿಗೂ ಸಹ ಅಂಗಮಾರಿ ಸೇರಿ ವಿವಿಧ ರೋಗಗಳು ಆವರಿಸುತ್ತಿದ್ದು, ನಿಖರವಾಗಿ ಯಾವ ರೋಗ ತಗುಲಿದೆ ಎಂದು ತಿಳಿಯುತ್ತಿಲ್ಲ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಕೂಡಲೇ ತಜ್ಞರನ್ನು ನೇಮಿಸಿ ರೋಗ ಪತ್ತೆ ಹಾಗೂ ಔಷಧೋಪಚಾರ ಕುರಿತು ಬೆಳಗಾರಿಗೆ ಮಾಹಿತಿ ಒದಗಿಸಬೇಕು ಹಾಗೂ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಸಂಘದ ಉಪಾಧ್ಯಕ್ಷ ವಿಶ್ವನಾಥ ಮಾತನಾಡಿ, ಹಸಿ ಶುಂಠಿಗೆ ರೋಗಭಾದೆಯಿಂದ ಸುಮಾರು 30ರಷ್ಟು ಬೆಳೆ ನಾಶವಾಗಿದೆ. ಪ್ರತಿ ಬೆಳೆಗಾರರು ಪ್ರತಿ ಎಕರೆಗೆ ₹4 ಲಕ್ಷದಿಂದ ₹4.5 ಲಕ್ಷವನ್ನು ಶುಂಠಿ ಬೆಳೆಯಲು ವೆಚ್ಚ ಮಾಡಿದ್ದಾರೆ. ಈ ರೋಗಕ್ಕೆ ನಿಖರವಾದ ಔಷಧಿ ದೊರೆಯುತ್ತಿಲ್ಲ. ಕಳಪೆ ಗುಣಮಟ್ಟದ ಔಷಧಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ರೋಗ ಹತೋಟಿಗೆ ಬರುತ್ತಿಲ್ಲ. ಸರ್ಕಾರ ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ರೈತರಿಗೆ ಔಷಧಿ ಪೂರೈಸಬೇಕು ಎಂದು ಒತ್ತಾಯಿಸಿದರು.

ಶುಂಠಿ ಬೆಳೆಯನ್ನು ಜಿಲ್ಲೆ ಸೇರಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಬೆಳೆಯಲಾಗುತ್ತಿದ್ದು, ಅಲ್ಲಿಯೂ ಬೆಳೆ ಅಂಗಮಾರಿ ರೋಗಕ್ಕೆ ತುತ್ತಾಗುತ್ತಿದೆ. ಸರ್ಕಾರ ಕೂಡಲೇ ಪರಿಹಾರ ಕ್ರಮಗಳನ್ನ ಕೈಗೊಳ್ಳಬೇಕು. ಬೆಳೆ ನಷ್ಟಕ್ಕೆ ಪರಿಹಾರ ಘೋಷಣೆ ಮಾಡಬೇಕು. ಬೆಂಬಲ ಬೆಲೆಯಲ್ಲಿ ಶುಂಠಿ ಖರೀದಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮೊಹಮ್ಮದ್ ಅನಿಸ್ ಪಾಷಾ,ಶಾಹು ಹಾಸನ್, ಸೈಯದ್ ಅಫೀಜ್ ,ಇಲಿಯಾಜ್, ರಮೇಶ್, ನವೀನ್ ಕುಮಾರ್, ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.