ADVERTISEMENT

ಉಂಗುರಕ್ಕಾಗಿ ಬೆರಳು ಕತ್ತರಿಸಿದ ದುಷ್ಟರು:₹6.40 ಲಕ್ಷ ಮೌಲ್ಯದ ಚಿನ್ನ ದೋಚಿ ಪರಾರಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 13:33 IST
Last Updated 31 ಮೇ 2025, 13:33 IST
<div class="paragraphs"><p> ಪರಾರಿ (ಪ್ರಾತಿನಿಧಿಕ ಚಿತ್ರ)</p></div>

ಪರಾರಿ (ಪ್ರಾತಿನಿಧಿಕ ಚಿತ್ರ)

   

ಅರಸೀಕೆರೆ: ನಗರದ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕ ಗುತ್ತಿಗೆದಾರ ವಿಜಯಕುಮಾರ್ (46) ಅವರನ್ನು ಕೊಲೆ ಮಾಡಿರುವ ಕಟ್ಟಡ ಕಾರ್ಮಿಕರು, ಅವರ ಮೈಮೇಲಿದ್ದ ₹6.40 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಚಿನ್ನದ ಉಂಗುರಕ್ಕಾಗಿ ವಿಜಯಕುಮಾರ್ ಅವರ ಬೆರಳನ್ನೇ ಕತ್ತರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ಬಿಹಾರದ ವಿಕ್ರಂ ಮತ್ತು ಸಚಿನ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಚಿನ್ನದ ಉಂಗುರಗಳು ಹಾಗೂ ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದರು.

ADVERTISEMENT

ಆರ್‌.ಆರ್‌. ಹೋಟೆಲ್‌ ಮಾಲೀಕ ಶ್ರೀನಿವಾಸರೆಡ್ಡಿ ಅವರು ಅರಸೀಕೆರೆಯ ಕೆಎಸ್‌ಆರ್‌ಟಿಸಿ ಡಿಪೋ ಎದುರಿನ ಖಬರಸ್ಥಾನ ಪಕ್ಕದ ಜಾಗದಲ್ಲಿ ವಾಸಕ್ಕೆ ಮನೆ ಹಾಗೂ ಹೋಟೆಲ್‌ಗೆ ಕಟ್ಟಡ ನಿರ್ಮಿಸುತ್ತಿದ್ದು, ವಿಜಯಕುಮಾರ್ ಅವರಿಗೆ ಗುತ್ತಿಗೆ ನೀಡಿದ್ದರು.

ಶುಕ್ರವಾರ ರಾತ್ರಿ 11.15ಕ್ಕೆ ಶ್ರೀನಿವಾಸರೆಡ್ಡಿ ಅವರಿಗೆ ಕರೆ ಮಾಡಿದ್ದ ವಿಜಯಕುಮಾರ್, ‘ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಾಗಿರುವ ಹುಡುಗರು ಗಲಾಟೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಹೋಗಿ ಬರುವುದಾಗಿ’ ತಿಳಿಸಿದ್ದರು. ನಂತರ ರಾತ್ರಿ 12.48ಕ್ಕೆ ಶ್ರೀನಿವಾಸರೆಡ್ಡಿಯವರು, ವಿಜಯಕುಮಾರ್ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ.

ವಿಜಯಕುಮಾರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ವಿಕ್ರಂ ಹಾಗೂ ಸಚಿನ್‌, ಕಬ್ಬಿಣದ ರಾಡು, ಸಿಲಿಂಡರ್ ಮತ್ತು ಕೆಲಸ ಮಾಡುವ ಕರ್ನೆಯಿಂದ ವಿಜಯ್‍ಕುಮಾರ್‌ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊರಳಿನಲ್ಲಿದ್ದ ಚಿನ್ನದ ಸರ ಮತ್ತು 3 ಚಿನ್ನದ ಉಂಗುರ ಕಿತ್ತುಕೊಂಡು ವಿಜಯ್‍ಕುಮಾರ್‌ ಅವರ ಬೈಕ್ ಸಮೇತ ಪರಾರಿಯಾಗಿದ್ದಾರೆ.

ವಿಜಯಕುಮಾರ್ ಅವರ ತಲೆ, ಹಣೆಗೆ ಪೆಟ್ಟಾಗಿದ್ದು, ಬಲಗೈ ಮಧ್ಯದ ಬೆರಳು ತುಂಡಾಗಿತ್ತು. ಚಿನ್ನಾಭರಣ ಕದಿಯಲು ವಿಕ್ರಂ ಹಾಗೂ ಸಚಿನ್ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಮೊಹಮ್ಮದ್‌ ಸುಜೀತಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.