ADVERTISEMENT

ಹಾಸನ: ಹೇಮೆ ಒಡಲು ಭರ್ತಿ, ಮೂಡಿದ ಮಂದಹಾಸ

ಸತತ ಮೂರು ವರ್ಷದಿಂದ ತುಂಬುತ್ತಿರುವ ಜಿಲ್ಲೆಯ ಜೀವನದಿ

ಕೆ.ಎಸ್.ಸುನಿಲ್
Published 9 ಆಗಸ್ಟ್ 2020, 14:06 IST
Last Updated 9 ಆಗಸ್ಟ್ 2020, 14:06 IST
ಗೊರೂರಿನ ಹೇಮಾವತಿ ಜಲಾಶಯ.
ಗೊರೂರಿನ ಹೇಮಾವತಿ ಜಲಾಶಯ.   

ಹಾಸನ: ಐದು ದಿನಗಳಿಂದ ಭೋರ್ಗರೆದ ಮಳೆಗೆ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಹೇಮೆ ನಂಬಿರುವ ಲಕ್ಷಾಂತರ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ವಾರದ ಅಂತರದಲ್ಲಿ ಸುರಿದ ಭಾರಿ ಮಳೆಗೆ 17 ಅಡಿ (12.52 ಟಿಎಂಸಿ) ನೀರು ಸಂಗ್ರಹವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಹೇಮೆ ಒಡಲು ತುಂಬಿತ್ತು. 2018ರಲ್ಲೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಿದ್ದರಿಂದ ಜುಲೈನಲ್ಲಿ ಭರ್ತಿಯಾಗಿತ್ತು. ಸತತ ಮೂರು ವರ್ಷದಿಂದ ಒಡಲು ತುಂಬುತ್ತಿರುವುದರಿಂದ ಅನ್ನದಾತ, ಕುಡಿಯಲು ಆಶ್ರಯಿಸಿದ್ದ ಜನ, ಜಾನುವಾರುಗಳಲ್ಲಿ ನಿರುಮ್ಮಳ ಭಾವನೆ ಮೂಡಿದೆ.

2,922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 2018.13 ಅಡಿ ನೀರು ಸಂಗಹ್ರವಾಗಿದ್ದು, ಭರ್ತಿಗೆ ಕೇವಲ ಮೂರು ಅಡಿ ಬಾಕಿ ಇದೆ. ಶನಿವಾರ ಒಳ ಹರಿವು 50,036 ಕ್ಯುಸೆಕ್‌ ಇತ್ತು. ಭಾನುವಾರ ಬೆಳಿಗ್ಗೆ 29,478 ಕ್ಯುಸೆಕ್‌ಗೆ ಇಳಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ, ನಾಲೆಗೆ ಶುಕ್ರವಾರ ರಾತ್ರಿ 20 ಸಾವಿರ ಕ್ಯುಸೆಕ್‌ ನೀರು ಹರಿಯಬಿಡಲಾಗಿತ್ತು. ನೀರಿನ ಹೊರ ಹರಿವು ನಾಲೆ ಮತ್ತು ನದಿ ಸೇರಿ ಒಟ್ಟು 4200 ಕ್ಯುಸೆಕ್‌ ಇದೆ.

ADVERTISEMENT

ಅಣೆಕಟ್ಟೆ ಭದ್ರತೆ ಮತ್ತು ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯದ ಮಟ್ಟ 2919 ಅಡಿ ಕಾಯ್ದುಕೊಂಡು ಆರು ಗೇಟ್‌ ಮೂಲಕ ನದಿ, ನಾಲೆಗೆ ನೀರು ಹರಿಸಲಾಗುತ್ತದೆ.

ಹೇಮೆ ಒಡಲು ತುಂಬಿರುವುದರಿಂದ ಅಚ್ಚುಕಟ್ಟು ಭಾಗದ ರೈತರು ಬೆಳೆ ಬೆಳೆಯಲು ನೀರು ಸಿಗಲಿದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಯ 6,55,00 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರನ್ನು ಹೇಮಾವತಿ ಜಲಾಶಯದಿಂದ ಪೂರೈಸಲಾಗುತ್ತದೆ. ಹಾಸನ 1,07,480 ಎಕರೆ, ಮಂಡ್ಯ 2,27,920 ಎಕರೆ, ತುಮಕೂರು 3,14,000 ಎಕರೆ ಮತ್ತು ಮೈಸೂರು ಜಿಲ್ಲೆಯಲ್ಲಿ 5,600 ಎಕರೆ ಇದೆ. ತುಮಕೂರು ಮತ್ತು ಮಂಡ್ಯ ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಒಟ್ಟು 24 ತಾಲ್ಲೂಕುಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.

ಹೇಮಾವತಿ ಎಡದಂಡೆ ನಾಲೆ, ಹೇಮಾವತಿ ಬಲದಂಡೆ ನಾಲೆ ಮತ್ತು ಹೇಮಾವತಿ ಬಲ ಮೇಲ್ದಂಡೆ ನಾಲೆ ವ್ಯಾಪ‍್ತಿಯಲ್ಲಿ 2,71,000 ಎಕರೆ ಅಚ್ಚುಕಟ್ಟು ಪ್ರದೇಶ ಇದೆ. ಅಣೆಕಟ್ಟು ನಾಲೆಗಳಾದ ಚಂಗರವಳ್ಳಿ, ಶ್ರೀರಾಮದೇವರ ಉತ್ತರ ಮತ್ತು ದಕ್ಷಿಣ ನಾಲೆ ವ್ಯಾಪ್ತಿಯಲ್ಲಿ ಒಟ್ಟು 13,680 ಎಕರೆ ಅಚ್ಚುಕಟ್ಟು ಪ್ರದೇಶ ಇದೆ. ಅಲ್ಲದೇ ಮಂದಗೆರೆ ಮತ್ತು ಹೇಮಗಿರಿ ವ್ಯಾಪ್ತಿಯಲ್ಲಿ 21,000 ಎಕರೆ ಹಾಗೂ ತುಮಕೂರು ಮುಖ್ಯ ನಾಲೆ ಮತ್ತು ಉಪ ನಾಲೆಯ ವ್ಯಾಪ್ತಿಯ 2,37,000 ಎಕರೆ ಅಚ್ಚುಕಟ್ಟು ಪ್ರದೇಶವಿದೆ.

ಜಲಾಶಯಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಅಣೆಕಟ್ಟೆ ಎಂಜಿನಿಯರ್‌ಗಳ ಜತೆ ಚರ್ಚಿಸಿ ಹೇಮಾವತಿ ಜಲಾನಯನ ಪ್ರದೇಶಗಳ ಕೆರೆ-ಕಟ್ಟೆಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನೀರನ್ನು ಬಿಡುವಂತೆ ಸೂಚಿಸಿದರು.

‘ಜಲಾಶಯಕ್ಕೆ ಪ್ರತಿದಿನ ಸರಾಸರಿ ನಾಲ್ಕು ಅಡಿ ನೀರು ಬರುತ್ತಿದೆ. ಒಳ ಹರಿವು ಹೆಚ್ಚಾಗಿದ್ದರಿಂದ ಶುಕ್ರವಾರ 20 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗಿತ್ತು. ಸೋಮವಾರ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ನಡೆಯಲಿದೆ. ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಪ್ರಕಾರ ನೀರು ಹೊರ ಬಿಡಲಾಗುವುದು. ಒಳ ಹರಿವಿನ ಪ್ರಮಾಣ ಆಧರಿಸಿ ಹೊರ ಹರಿವು ನಿರ್ಧರಿಸಲಾಗುವುದು’ಎಂದು ಹೇಮಾವತಿ ಜಲಾಶಯ ಕಾರ್ಯಪಾಲಕ ಎಂಜಿನಿಯರ್ ಗಂಗಾಧರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.