ADVERTISEMENT

40 ಸಾವಿರ ಶಾಲೆ ಮುಚ್ಚುವ ಹುನ್ನಾರ: ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:48 IST
Last Updated 29 ಡಿಸೆಂಬರ್ 2025, 6:48 IST
ಹಾಸನದ ಹೇಮಾವತಿ ಪ್ರತಿಮೆ ಎದುರು ಎಐಡಿಎಸ್ಒ 72ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಭಟನೆ ನಡೆಸಿದರು
ಹಾಸನದ ಹೇಮಾವತಿ ಪ್ರತಿಮೆ ಎದುರು ಎಐಡಿಎಸ್ಒ 72ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಭಟನೆ ನಡೆಸಿದರು   

ಹಾಸನ: ಸಾರ್ವಜನಿಕ ಶಿಕ್ಷಣವನ್ನು ಉಳಿಸಬೇಕು ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನೀತಿಗೆ ವಿರೋಧವಾಗಿ ಹೋರಾಟ ನಡೆಸಬೇಕು ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ಹೇಳಿದರು.

ಎಐಡಿಎಸ್ಒ 72ನೇ ಸಂಸ್ಥಾಪನಾ ದಿನ ಪ್ರಯುಕ್ತ ನಗರದ ಹೇಮಾವತಿ ಪ್ರತಿಮೆ ಎದುರು ವಿದ್ಯಾರ್ಥಿಗಳು ನಡೆಸಿದ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಹೋರಾಟದಲ್ಲಿ ಅವರು ಮಾತನಾಡಿದರು. ‘71 ವರ್ಷಗಳಿಂದ ಎಐಡಿಎಸ್ಒ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ ಇಂದು ಸರ್ಕಾರ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಶ್ರಮಿಕರ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯಲು ಮುಂದಾಗಿದೆ ಎಂದು ಆರೋಪಿಸಿದರು. 

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯಂತಹ ಅಮಾನವೀಯ ಕೃತ್ಯಗಳು ಕೊನೆಗೊಳ್ಳಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲಾ ಘಟಕದ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ಉನ್ನಾವ್‌  ಅತ್ಯಾಚಾರ ಪ್ರಕರಣದ ದೋಷಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಅಮಾನತಿಗೆ ಆದೇಶಿಸಿದ ದೆಹಲಿ ಹೈಕೋರ್ಟ್ ತೀರ್ಪು ಮಹಿಳೆಯರ ಸುರಕ್ಷತೆ  ಕ್ಷೀಣಿಸುವಂತೆ ಮಾಡಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆ ಕುರಿತಾಗಿ ಸುಪ್ರೀಂ ಕೋರ್ಟ್ ಇತ್ತೀಚಿನ ತೀರ್ಪು ಪರಿಸರ ಮತ್ತು ಜನಜೀವನಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಭಗತ್ ಸಿಂಗ್, ನೇತಾಜಿ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಅವರ ಆಶಯಗಳನ್ನು ನೆನಪಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಎಐಡಿಎಸ್‌ ಒ ರಾಜ್ಯ ಘಟಕದ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಕಾರ್ಯಕರ್ತರಾದ ಚಂದ್ರಶೇಖರ್, ಧನಂಜಯ್ ರಾಕೇಶ್, ಶಿವಲಿಂಗ, ನಾಗೀನ ಬಾನು ,  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.